ಪ್ರಕಾಶ್ ಮಂಜೇಶ್ವರ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಹತೋಟಿಗೆ ತರಲು ಹೋಂ ಐಸೊಲೇಷನ್‌ನಲ್ಲಿ ಇರುವವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ವರ್ಗಾಯಿಸಿ ಎಂದು ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದರು.
ಆದರೆ ಇದನ್ನು ಪಾಲಿಸಲು ಹೋದ ಇಲಾಖೆ ಅಧಿಕಾರಿಗಳು ಜನರಿಂದ ಕಲ್ಲು, ಕೋಲು ಮತ್ತಿತರ ಆಯುಧ ಎದುರಿಸುವ ಸ್ಥಿತಿ ಎದುರಾಗಿದೆ. ಕಳೆದ ಕೆಲದಿನಗಳಿಂದ ದೈನಂದಿನ ಗರಿಷ್ಠ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲೇ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದೆ. ಇಲಾಖೆ ಮುಖ್ಯಸ್ಥರು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಭಾನುವಾರ ಸಹಿತ ವಾರದ ರಜಾ ದಿನಗಳಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರೂ, ಅಂತಾರಾಜ್ಯ ಗಡಿಗಳನ್ನು ಬಂದ್ ಮಾಡಿದರೂ ದೈನಂದಿನ ಸೋಂಕು ಪ್ರಮಾಣ ಶೇ.3.5 ಆಸುಪಾಸಿನಲ್ಲೇ ಇದೆ.
ಭಿನ್ನ ಪರಿಸ್ಥಿತಿ: ಕೋವಿಡ್ ಆರಂಭದ ದಿನಗಳಲ್ಲಿ ಕೂಡ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗುತ್ತಿದ್ದರೂ ಅಲ್ಪಾವಧಿಯಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಆ ಸಂದರ್ಭ ಸೋಂಕಿತರು ಎಲ್ಲರೂ ಸಾಂಸ್ಥಿಕ ನಿಗಾವಣೆಗೆ (ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್) ಒಳಗಾಗುವುದು ಕಡ್ಡಾಯವಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಕೋವಿಡ್ ಕೇರ್ ಸೆಂಟರ್‌ನಲ್ಲಿ ವಸತಿ, ಊಟ, ಉಪಹಾರ ಎಲ್ಲ ಉಚಿತ ಎಂದರೂ ಜನರು ಒಪ್ಪುತ್ತಿಲ್ಲ.
ಹೋಂ ಕ್ವಾರಂಟೈನ್‌ನಲ್ಲಿ ಇರುವ ರೋಗಿಗಳು ಮನೆಯಲ್ಲಿ ಕೂಡ ಕುಟುಂಬದ ಸದಸ್ಯರ ಜತೆ ಸುರಕ್ಷಿತ ಅಂತರ ಕಾಪಾಡಲು ಸಾಧ್ಯವಾಗದೆ ಇರುವುದು, ಸೋಂಕಿತರಲ್ಲಿ ಅನೇಕ ಮಂದಿ ಸತ್ಯ ವಿಷಯ ಮುಚ್ಚಿಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಆರೋಗ್ಯದಲ್ಲಿ ಇರುವವರಂತೆ ಓಡಾಡುವುದು ರೋಗ ಹರಡುವ ವೇಗ ನಿಯಂತ್ರಣಕ್ಕೆ ತರಲು ಸಮಸ್ಯೆಯಾಗಿದೆ.
3173ರಲ್ಲಿ 263 ಮಂದಿ ಮಾತ್ರ ಕೇರ್ ಸೆಂಟರ್‌ಗೆ!: ಪ್ರಸ್ತುತ ಭಾನುವಾರ ಸಾಯಂಕಾಲದ ವೇಳೆಗೆ ದಕ್ಷಿಣ ಕನ್ನಡದಲ್ಲಿ 3,173 ಕೋವಿಡ್ ಸೋಂಕಿತರು ಇದ್ದಾರೆ. ಇದರಲ್ಲಿ 2,255 ಮಂದಿ ಹೋಂ ಐಸೋಲೇಶನ್‌ನಲ್ಲಿ ಇದ್ದು, 263 ಮಂದಿ ಮಾತ್ರ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇದ್ದಾರೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ನಾಲ್ಕು ದಿನಗಳ ಹಿಂದಿನ ತನಕ ಶೇ.4 ಇದ್ದು, ಕಳೆದ ನಾಲ್ಕು ದಿನಗಳಲ್ಲಿ ಶೇ.8ಕ್ಕೆ ಏರಿಕೆಯಾಗಿದೆ. ಜಿಲ್ಲಾದ್ಯಂತ 35 ಕೋವಿಡ್ ಸೋಂಕಿತರ ಆರೋಗ್ಯ ಕೇಂದ್ರಗಳಿದ್ದು, ಜನರ ಆವಶ್ಯಕತೆಗೆ ತಕ್ಕಂತೆ ಸಂಖ್ಯೆ ಹೆಚ್ಚು ಮಾಡಲು ಸಮಸ್ಯೆ ಇಲ್ಲ ಎನ್ನುತ್ತಿದೆ ಆರೋಗ್ಯ ಇಲಾಖೆ.
ಕೋವಿಡ್ ಸೋಂಕಿತರನ್ನು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕೇರ್ ಕೇಂದ್ರಗಳಿಗೆ ಸೇರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಅದರ ಜತೆ ಕೈಜೋಡಿಸುತ್ತಿರುವ ವಿವಿಧ ಇಲಾಖೆ ಹಾಗೂ ಸಾಮಾಜಿಕ ಕಾರ್ಯಕರ್ತರ ಗುಂಪು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಕೋವಿಡ್ ಕೇರ್ ಸೆಂಟರ್ ಸೇರುವ ಸೋಂಕಿತರ ಸಂಖ್ಯೆ ಕಳೆದ ನಾಲ್ಕು ದಿನಗಳಲ್ಲಿ ಶೇ.4 ಏರಿಕೆಯಾಗಿದೆ ಎನ್ನುವುದು ಸಮಾಧಾನದ ಸಂಗತಿ.
ಡಾ.ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ, ದಕ್ಷಿಣ ಕನ್ನಡ