ವಿಜಯವಾಣಿ ಸುದ್ದಿಜಾಲ ಗದಗ
ಕೋವಿಡ್ ಅಕ್ರಮ ಹಾಗೂ ಹಿಂದಿನ ಸರ್ಕಾರದ 40% ಕಮಿಷನ್ ತನಿಖೆಯು ದ್ವೇಷದಿಂದ ಕೈಗೊಂಡಿದ್ದಲ್ಲ. ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಳ್ಳಲಾಗಿದೆ. ತನಿಖೆಯನ್ನು ತಾರ್ಕಿಕ ಅಂತ್ಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಐಎಂಎ ಸಮ್ಮೇಳನ ಉದ್ಘಾಟಿಸಲು ಗದಗ ನಗರಕ್ಕೆ ಭಾನುವಾರ ಆಗಮಿಸಿದ್ದ ಸಚಿವ ಗುಂಡೂರಾವ್, ಕೋವಿಡ್ ಅಕ್ರಮ ಹಾಗೂ 40% ಕಮಿಷನ್ ಕುರಿತು ಸಾರ್ವಜನಿಕ ಲೆಕ್ಕ ಪತ್ರ ವರದಿಯನ್ನು ಹಿಂದಿನ ಸರ್ಕಾರ ಸದನಕ್ಕೆ ಒಪ್ಪಿಸಿರಲಿಲ್ಲ. ವರದಿ ಆಧಾರದಲ್ಲಿ ಹಾಗೂ ಇತರೆ ಮಾಹಿತಿ ಆಧಾರದ ಮೇಲೆ ತನಿಕೆಗೆ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆ ನಿವೃತ್ತ ಹೈಕೋರ್ಟ್ ನ್ಯಾ. ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದರು.
ತನಿಖೆಗೆ ಆದೇಶಿಸಿದ ಹಿನ್ನೆಲೆ ಬಿಜೆಪಿ ಮುಖಂಡರಿಗೆ ಭಯ ಶುರುವಾಗಿದೆ. ತನಿಖೆಯನು ವಿರೋಧ ಪಕ್ಷಗಳು ಸ್ವಾಗತಿಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿನ ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.
ರಾಜ್ಯ ನಾಯಕರ ಬಗ್ಗೆ ಅಸಡ್ಡೆ:
ಇಸ್ರೋಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ನಾಯಕರ ಬಗ್ಗೆ ತೋರಿದ ಅಸಡ್ಡೆಯಿಂದ ರಾಜ್ಯ ಬಿಜೆಪಿ ನಾಯಕರ ಮೇಲೆ ಪ್ರಧಾನಿ ಮೋದಿ ಅವರಿಗೆ ಇರುವ ಅಸಡ್ಡೆ ಸ್ಪಷ್ಟವಾಗಿ ಘೊಚರಿಸಿದೆ. ಇವರಿಗಾದರೂ ಸ್ವಾಭಿಮಾನ ಇರಬೇಕಲ್ಲವೇ ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.