ರಾಯಚೂರು ರಾಜ್ಯದಲ್ಲಿ ದಿನೇದಿನೆ ಕೋವಿಡ್-19ರ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಜಿಲ್ಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕರು ಭಯಪಡದೆ ಜಾಗೃತರಾಗಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.
ಕೋವಿಡ್ -19ರ ಪರೀಕ್ಷೆಗಾಗಿ ರ‌್ಯಾಟ್ ಟೆಸ್ಟ್ ವೈದ್ಯರ ಸಲಹೆ ಮೇರೆಗೆ ರಿಮ್ಸ್ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರ್‌ಟಿಪಿಸಿಆರ್ ಪರೀಕ್ಷೆಗೆ ವಿಮ್ಸ್ ಬಳ್ಳಾರಿ ಪ್ರಯೋಗಾಲಯ ನಿಗದಿ ಪಡಿಸಿರುವುದರಿಂದ ಎಲ್ಲಾ ಮಾದರಿಗಳನ್ನು ಅಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುವುದು.
ಜಿಲ್ಲೆಯ ರಿಮ್ಸ್ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ವಾರ್ಡ್ ಮತ್ತು 5 ಐ.ಸಿ.ಯು. ಹಾಸಿಗೆಗಳು ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಗಳ ವಾರ್ಡ್ನ್ನು ಕಾಯ್ದಿರಿಸಲಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಭಯಪಡುವ ಅವಶ್ಯಕತೆ ಇರುವುದಿಲ್ಲ. ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅವಶ್ಯಕವಾಗಿರುತ್ತದೆ. ಯಾವುದೇ ತರಹದ ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು.
ಖಚಿತ ಪ್ರಕರಣಗಳಲ್ಲಿ ಅಲ್ಪಪ್ರಮಾಣದ ಲಕ್ಷಣಗಳು ಇರುವ ರೋಗಿಗಳಿಗೆ ಹೋಮ್ ಐಸೋಲೆಷನ್ ಮಾಡಲಾಗುವುದು. ತೀವ್ರತರದ ರೋಗ ಲಕ್ಷಣಗಳು ಇರುವವರಿಗೆ ರಿಮ್ಸ್ ಮತ್ತು ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.