ಬೆಂಗಳೂರು: ಸೇರೋ ನಡೆಸಿದ ಸರ್ವೆ ಪ್ರಕಾರ ರಾಜ್ಯದ ಶೇ.16 ಜನರಲ್ಲಿ ಕೋವಿಡ್ ಪ್ರತಿಕಾಯ ಪತ್ತೆಯಾಗಿದ್ದು, ಇದು ಮಹತ್ವದ ಬೆಳವಣಿಗೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈ, ಪುಣೆ, ದೆಹಲಿ ನಗರಗಳಲ್ಲಿ ಕೆಲ ಸ್ಥಳಗಳಲ್ಲಿ ಮಾತ್ರ ಸರ್ವೆ ಮಾಡಲಾಗಿದ್ದು, ಅಲ್ಲಿ ಸೋಂಕು ಹೆಚ್ಚಿತ್ತು. ಆದರೆ ರಾಜ್ಯದ ಎಲ್ಲ ಜಿಲ್ಲೆ, ಬೆಂಗಳೂರಿನ 8 ವಲಯಗಳಲ್ಲೂ ಸರ್ವೆ ನಡೆಸಲಾಗಿದ್ದು, ಒಟ್ಟಾರೆ 16,585 ಜನರ ಮಾದರಿಗಳನ್ನು ಪರೀಕ್ಷೆ ಮಾಡಿದ್ದು, 15,624 ಜನರ ಫಲಿತಾಂಶ ಬಂದಿದೆ. ಸರ್ವೆ ವರದಿಯಿಂದ ಶೇ.27.3 ಜನ ಸೋಂಕಿಗೆ ಒಳಗಾಗಿರಬಹುದೆಂದು ಅಂದಾಜು ಮಾಡಲಾಗಿದೆ. ರಾಜ್ಯದ ಜನಸಂಖ್ಯಾ ಆಧಾರದ ಮೇಲೆ ಹೇಳುವುದಾದರೆ ಸುಮಾರು 1.93 ಕೋಟಿ ಜನರಿಗೆ ಕರೊನಾ ಬಂದು ಹೋಗಿರಬಹುದು ಎಂದು ಅಭಿಪ್ರಾಯಪಟ್ಟರು.
ಸೋಂಕು ವರ್ಗೀಕರಣ: ಹೈ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಕಡಿಮೆ ರಿಸ್ಕ್ ಎಂದು ವರ್ಗೀಕರಣ ಮಾಡಿ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ವೈರಸ್ ದೇಹಕ್ಕೆ ಬಂದಾಗ ಪ್ರತಿರೋಧಕವಾಗಿ ಐಜಿಜಿ ಉತ್ಪತ್ತಿಯಾಗುತ್ತದೆ. ರೋಗ ನಿರೋಧಕ ಶಕ್ತಿ (ಐಜಿಜಿ) ಹೊಂದಿದವರು ಹಾಗೂ ಸಕ್ರಿಯ ಸೋಂಕಿತರನ್ನು ಪತ್ತೆ ಮಾಡುವ ಮೂಲಕ ನಡೆದ ಈ ಸರ್ವೆ ಕ್ರಮಬದ್ಧವಾಗಿದೆ ಎಂದರು.
ಯಾವಾಗ ಸರ್ವೆ?: ಸೆ.3 ರಿಂದ 16 ರವರೆಗೆ ಸರ್ವೆ ನಡೆದಿತ್ತು. ಕೋವಿಡ್ ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ ರಾಜ್ಯದಲ್ಲಿ ಮರಣ ಪ್ರಮಾಣ ಶೇ.0.05 ಇದ್ದರೆ, ಮುಂಬೈಯಲ್ಲಿ ಶೇ.0.05-0.10, ಪುಣೆಯಲ್ಲಿ ಶೇ.0.08, ದೆಹಲಿಯಲ್ಲಿ ಶೇ.0.09, ಚೆನ್ನೈನಲ್ಲಿ ಶೇ.0.13 ಮರಣ ಪ್ರಮಾಣವಿದೆ ಎಂದರು. ರಾಜ್ಯದಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. ಗುಣಮುಖರ ಪ್ರಮಾಣ ಶೇ.95 ಆಗಿದೆ. ಹೆಚ್ಚು ಪರೀಕ್ಷೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವುದು ಸೇರಿ ಹಲವಾರು ಕ್ರಮಗಳನ್ನು ಜಾರಿ ಮಾಡಲು ಈ ಸರ್ವೆ ನೆರವಾಗಲಿದೆ ಎಂದರು. ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಕೋವಿಡ್ ಸರ್ವೆ ಸಮಿತಿಯ ಮುಖ್ಯಸ್ಥ ಡಾ.ಗಿರಿಧರ ಬಾಬು ಉಪಸ್ಥಿತರಿದ್ದರು.
ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಆರೋಗ್ಯದ ನಿಗಾ ಇರಿಸಲು ಪುನರ್ವಸತಿ ಕೇಂದ್ರ ಆರಂಭಿಸಲಾಗುವುದು. ಡಿಸೆಂಬರ್, ಮಾರ್ಚ್ನಲ್ಲಿ ಮತ್ತೊಮ್ಮೆ ಸೇರೊ ಸಮೀಕ್ಷೆ ನಡೆಸಲಾಗುವುದು. | ಡಾ. ಕೆ. ಸುಧಾಕರ್ ಆರೋಗ್ಯ-ವೈದ್ಯಕೀಯ ಶಿಕ್ಷಣ ಸಚಿವ
ರಾಜ್ಯದ ಕ್ರಮಕ್ಕೆ ಕೇಂದ್ರದ ಮೆಚ್ಚುಗೆ
ಬೆಂಗಳೂರು: ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿನ ಕರೊನಾ ಸ್ಥಿತಿಗತಿ ಹಾಗೂ ವ್ಯಾಕ್ಸಿನ್ ವಿತರಣೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಬುಧವಾರ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಸಚಿವ ಡಾ.ಕೆ.ಸುಧಾಕರ್ ವಿವರಣೆ ನೀಡಿದರು.
ಲಾಕ್ಡೌನ್ ಸಡಿಲಿಕೆ ಬಳಿಕ ಹೆಚ್ಚಳವಾಗಿದ್ದ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳ ಮೂಲಕ ಸಂಪೂರ್ಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ರಾಜ್ಯಕ್ಕೆ ಸಲಹೆ ನೀಡಿದರು.
ಕೇಂದ್ರಕ್ಕೆ ಮಾಹಿತಿ ನೀಡಿದ ಡಾ.ಕೆ.ಸುಧಾಕರ್, ಲಾಕ್ಡೌನ್ಗೆ ಮುನ್ನ ನಿಯಂತ್ರಣದಲ್ಲಿದ್ದ ಕರೊನಾ ಬಳಿಕ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣಿಕರು ಮತ್ತು ನೆರೆಯ ಐದು ರಾಜ್ಯಗಳ ಸಂಚಾರ ಸಂಪರ್ಕದಿಂದ ಹೆಚ್ಚಳವಾಯಿತು. ಆದರೂ ಕಟ್ಟುನಿಟ್ಟಿನ ಕ್ರಮ ಮತ್ತು ಟೆಸ್ಟ್ ಸಂಖ್ಯೆ ಹೆಚ್ಚಳದ ಮೂಲಕ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಮರಣದ ಪ್ರಮಾಣವನ್ನು ಶೇಕಡಾ ಒಂದಕ್ಕಿಂತ ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಮನವಿ: ರಾಜ್ಯದಲ್ಲಿರುವ ಕೇಂದ್ರದ ಕೆಲ ಲ್ಯಾಬ್ಗಳಲ್ಲಿ ಟೆಸ್ಟ್ಗಳ ಸಂಖ್ಯೆ ಹೆಚ್ಚಿಸಲು ಸೂಚನೆ ನೀಡಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಆರ್ಟಿಪಿಸಿಆರ್ ಕಿಟ್ ಪೂರೈಸಬೇಕು ಮತ್ತು ಆಕ್ಸಿಜನ್ ಪ್ಲಾಂಟ್ಗಳನ್ನು ಸ್ಥಾಪಿಸಲು ನೆರವು ನೀಡಬೇಕು ಎಂದು ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
35 ಸಾವಿರಕ್ಕಿಳಿದ ಕರೊನಾ ಕೇಸ್
ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಬುಧವಾರ 35,693ಕ್ಕೆ ಇಳಿಕೆಯಾಗಿದೆ. 8,045 ಮಂದಿ ಸೋಂಕು ಮುಕ್ತರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 7,88,780ಕ್ಕೆ ಮುಟ್ಟಿದೆ. ಇನ್ನು 3,377 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,35,773ಕ್ಕೆ ತಲುಪಿದೆ. ಮತ್ತೊಂದೆಡೆ ಸೋಂಕಿನಿಂದ 34 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 11,281ಕ್ಕೆ ಏರಿಕೆಯಾಗಿದೆ.
ದೀಪಾವಳಿ ಪಟಾಕಿ ನಿಷೇಧ?
ದೀಪಾವಳಿಯಲ್ಲಿ ಪಟಾಕಿ ನಿಷೇಧ ಮಾಡಬೇಕೋ ಬೇಡವೋ ಎನ್ನುವುದನ್ನು ತಜ್ಞರ ವರದಿ ಆಧಾರದ ಮೇಲೆ ನಿರ್ಣಯ ಮಾಡಲಾಗುವುದು ಎಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಶಂಕಿಸಿದ್ದಾರೆ. ಹಾಗಾಗಿಯೇ ತಜ್ಞರ ಸಮಿತಿ ರಚಿಸಿದ್ದು, ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.