ಜಿಲ್ಲೆ

ಹಲವು ದಿನಗಳ ಬಳಿಕ ದ.ಕ ನಿರಾಳ

Dakshina Kannada

ಮಂಗಳೂರು: ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದ ದ.ಕ ಜಿಲ್ಲೆಯಲ್ಲಿ ಶುಕ್ರವಾರ ಪಾಸಿಟಿವ್ ವರದಿ ಇರಲಿಲ್ಲ.

ಶುಕ್ರವಾರ ಸ್ವೀಕರಿಸಿದ ಎಲ್ಲ 581 ಮಾದರಿಗಳ ವರದಿ ನೆಗೆಟಿವ್ ಬಂದಿದೆ. 170 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಲಾಗಿದ್ದು, ಒಟ್ಟು 593 ಮಾದರಿಯ ವರದಿ ಬರಲು ಬಾಕಿಯಿದೆ. ಪ್ರಸ್ತುತ ಜಿಲ್ಲೆಯಲ್ಲಿ 59 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಶುಕ್ರವಾರ 72 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಕಂಟೇನ್ಮೆಂಟ್ ಜೋನ್: 2473ನೇ ಪಾಸಿಟಿವ್ ಪ್ರಕರಣ ಕಂಡು ಬಂದ ಮಂಗಳೂರು ತಾಲೂಕು ಸರಪಾಡಿ ಬಡಗುಳಿಪಾಡಿ ಗ್ರಾಮವನ್ನು ಮೇ 29ರಂದು ಕಂಟೇನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದ್ದು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಕಾರಿ ಅಭಿಯಂತರರನ್ನು ಸ್ಥಾನಿಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಮಗು ಸಾವು ವಿಚಾರಣೆಗೆ ಸಮಿತಿ

ದುಬೈನಿಂದ ಚಿಕಿತ್ಸೆಗೆಂದು ಬಂದು ಕ್ವಾರಂಟೈನ್ ವೇಳೆ ಸರಿಯಾಗಿ ಚಿಕಿತ್ಸೆ ಲಭಿಸದೆ ಮಹಿಳೆಯ ಗರ್ಭದಲ್ಲಿದ್ದ ಮಗು ತೀರಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ವಿಚಾರಣೆಗೆ ಸಮಿತಿ ರಚಿಸಿದ್ದಾರೆ. ಗರ್ಭಿಣಿಗೆ ಖಾಸಗಿ ಆಸ್ಪತ್ರೆಗೆ ದಾಖಲಾತಿ, ವಾಸವಾಗಿದ್ದ ಅಪಾರ್ಟ್‌ಮೆಂಟ್‌ಗೆ ಪ್ರವೇಶಕ್ಕೆ ಅವಕಾಶ ಸಿಗದೆ ಕ್ವಾರಂಟೈನ್ ಭಾಗವಾಗಿ ಲಾಡ್ಜ್‌ನಲ್ಲೇ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಸಮಸ್ಯೆಯಾಗಿತ್ತು ಎಂದು ಆಕೆಯ ಸಂಬಂಧಿ ಅಬ್ದುಲ್ ಅಜೀಜ್ ಬಸ್ತಿಕಾರ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡಲು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಅವರ ಅಧ್ಯಕ್ಷತೆಯಲ್ಲಿ 9 ಮಂದಿಯ ವಿಚಾರಣಾ ಸಮಿತಿ ರಚಿಸಲಾಗಿದ್ದು, ಶೀಘ್ರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.

ವಿಟ್ಲದಲ್ಲಿ ಕರೊನಾ ನೆಗೆಟಿವ್

ವಿಟ್ಲ: ಠಾಣೆಯ ಸಿಬ್ಬಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದಾರೆಂಬ ನಿಟ್ಟಿನಲ್ಲಿ ದಿಗ್ಬಂಧನಕ್ಕೊಳಗಾಗಿ ಸೋಮವಾರ ಗಂಟಲ ಮಾದರಿಗಳನ್ನು ಸಂಗ್ರಹಿದ್ದವರ ವರದಿ ಶುಕ್ರವಾರ ಲಭಿಸಿದೆ. ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಇದರ ಜತೆಗೆ ಪಾಸಿಟಿವ್ ಬಂದ ಪೊಲೀಸ್ ಸಿಬ್ಬಂದಿಯ ಮನೆಯವರ ವರದಿಯೂ ನೆಗೆಟಿವ್ ಬಂದಿದೆ. ಪೊಲೀಸರ ಸಂಪರ್ಕಕ್ಕೆ ಬಂದಿದ್ದಾರೆಂಬ ನಿಟ್ಟಿನಲ್ಲಿ ವಿಟ್ಲ ನಾಲ್ಕು ಪತ್ರಕರ್ತರ ಗಂಟಲ ದ್ರವದ ಪರೀಕ್ಷಾ ವರದಿಯೂ ನೆಗೆಟಿವ್ ಬಂದಿದೆ. ಈ ಮೂಲಕ ವಿಟ್ಲದಲ್ಲಿದ್ದ ಕರೊನಾ ಆತಂಕ ದೂರವಾಗಿದೆ.

ಕಾಸರಗೋಡಿನ ನಾಲ್ವರಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ನಾಲ್ಕು ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ. ಇದರೊಂದಿಗೆ ಕೇರಳದಲ್ಲಿ ಶುಕ್ರವಾರ ಒಟ್ಟು 62 ಮಂದಿಯಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ. ಇವರಲ್ಲಿ 33 ಮಂದಿ ವಿದೇಶದಿಂದ ಹಾಗೂ 23 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ವೈರಸ್ ಬಾಧಿತರಾಗಿದ್ದವರಲ್ಲಿ ಒಬ್ಬಾತ ಗುಣಮುಖರಾಗಿದ್ದಾರೆ.