ಜಿಲ್ಲೆ

13 ಜಿಲ್ಲೆಗಳಲ್ಲಿ ಕೈ ಮೀರಿದ ಕರೊನಾ: ಸೋಂಕು ಪಾಸಿಟಿವಿಟಿ ದರ ಏರಿಕೆ

ರಮೇಶ್​ ಕುಮಾರ್​​ ಬಿ ಎಡಮೋಳೆ

| ಪಂಕಜ ಕೆ.ಎಂ.

ಬೆಂಗಳೂರು: ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಕರೊನಾ ಸೋಂಕು ಪಾಸಿಟಿವಿಟಿ ದರ ಬಹಳಷ್ಟು ಏರಿಳಿತ ಕಂಡಿದೆ. ಆಗಸ್ಟ್ ಅಂತ್ಯದಲ್ಲಿ ಶೇ.11.82 ಇದ್ದ ಪಾಸಿಟಿವಿಟಿ ದರ, ಸೆಪ್ಟೆಂಬರ್ ಅಂತ್ಯಕ್ಕೆ ಶೇ.12.5ಕ್ಕೆ ಏರಿಕೆಯಾಗಿದೆ. 13 ಜಿಲ್ಲೆಗಳಲ್ಲಿ ಕರೊನಾ ಸೋಂಕು ಕೈ ಮೀರಿದೆ. ಈ ಹಿಂದೆ ತಜ್ಞರು ಅಂದಾಜು ಮಾಡಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ ಸಮೀಪಿಸಿದೆ. ಜತೆಗೆ ಚೇತರಿಕೆ ಪ್ರಮಾಣವೂ ಶೇ.80.64ಕ್ಕೆ ಹೆಚ್ಚಳವಾಗಿದ್ದು, ಮರಣ ಪ್ರಮಾಣ ಶೇ.1.66 ರಿಂದ ಶೇ. 1.48ಕ್ಕೆ ಇಳಿಕೆಯಾಗಿರುವುದು ಕೊಂಚ ನಿರಾಳತೆ ಮೂಡಿಸಿದೆ.

ಇನ್ನೊಂದೆಡೆ ಸಾಂಕ್ರಾಮಿಕ ರೋಗಗಳ ಲಕ್ಷಣಗಳಿರುವವರಲ್ಲೂ ಕರೊನಾ ಸೋಂಕು ದೃಢಪಡುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಕರೊನಾ ಸೋಂಕು ಆರಂಭದಲ್ಲಿ ಕೆಮ್ಮು, ಜ್ವರ, ಗಂಟಲು ನೋವು, ಉಸಿರಾಟದ ಸಮಸ್ಯೆ ಎಂದಷ್ಟೇ ತಿಳಿಯಲಾಗಿತ್ತು. ಆದರೀಗ ಸಾಂಕ್ರಾಮಿಕ ರೋಗಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣಗಳು ಕರೊನಾ ಸೋಂಕಿತರಲ್ಲೂ ಕಂಡು ಬರುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗಕ್ಕೆ ವ್ಯಕ್ತಿ ಒಳಪಟ್ಟಾಗ ಶೀತ, ಜ್ವರ, ತಲೆನೋವು, ಮೈಕೈ ನೋವು, ವಾಂತಿ, ಆಯಾಸ, ಕೆಲವೊಮ್ಮೆ ಅತಿಸಾರದಂತಹ ಲಕ್ಷಣಗಳು ಸಾಮಾನ್ಯವಾಗಿರುತ್ತದೆ. ಆದರೆ ಈ ಎಲ್ಲ ಲಕ್ಷಣಗಳ ಜತೆಗೆ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡವರಲ್ಲೂ ಕೋವಿಡ್ ಸೋಂಕು ದೃಢಪಡುತ್ತಿದೆ. ಹೀಗಾಗಿ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ರಾಜೀವ್​ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ನಾಗರಾಜ್ ತಿಳಿಸಿದರು.

ನಡೆದಾಗ, ಕೆಲಸ ಮಾಡಿದಾಗ ತೀವ್ರ ಆಯಾಸ ಆಗುತ್ತಿದ್ದರೆ, ಉಸಿರಾಡಲು ಕಷ್ಟವಾದರೆ. ಅದೂ ಸಹ ರೋಗದ ಲಕ್ಷಣವೇ ಆಗಿದೆ. ಹೀಗಾಗಿ ದೇಹದ ಉಷ್ಣಾಂಶ ಶೇ.98 ಮೀರದಂತೆ ಹಾಗೂ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 94ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ.

13 ಜಿಲ್ಲೆಗಳಲ್ಲಿ ಹೆಚ್ಚಿದ ಪಾಸಿಟಿವಿಟಿ ದರ

ಚಿಕ್ಕಮಗಳೂರು ಸೇರಿ ಕರ್ನಾಟಕದ ಹದಿಮೂರು ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವಿಟಿ ದರ ವ್ಯಾಪಕವಾಗಿ ಏರಿಕೆಯಾಗಿದ್ದು, ಇದು ರಾಜ್ಯದ ಒಟ್ಟಾರೆ ದರಕ್ಕಿಂತ (ಶೇ. 12.5)ಕ್ಕಿಂತ ಹೆಚ್ಚಾಗಿದೆ. ಮೈಸೂರು (ಶೇ. 20), ಚಿಕ್ಕಮಗಳೂರು (ಶೇ. 18.8), ಚಿತ್ರದರ್ಗ ಮತ್ತು ಕೊಡಗು ತಲಾ (ಶೇ. 18.1) ಹಾಸನ (ಶೇ. 16.6), ತುಮಕೂರು (ಶೇ. 15.9), ಗದಗ (ಶೇ. 15.3), ಶಿವಮೊಗ್ಗ (ಶೇ. 14.3), ಬೆಂಗಳೂರು ನಗರ (ಶೇ. 13.8), ಬೆಳಗಾವಿ (ಶೇ. 13.7), ಉಡುಪಿ (ಶೇ. 13.5), ಹಾವೇರಿ (ಶೇ. 13.3) ಹಾಗೂ ಚಿಕ್ಕಬಳ್ಳಾಪುರ (ಶೇ. 13.1) ಸೋಂಕು ಪಾಸಿಟಿವಿಟಿ ಪ್ರಮಾಣ ವರದಿಯಾಗಿದೆ.

ಕಡಿಮೆ ಸೋಂಕು ಪ್ರಮಾಣ

ದಾವಣಗೆರೆ (ಶೇ. 12.2), ಮಂಡ್ಯ (ಶೇ. 11.6), ಚಾಮರಾಜನಗರ ಮತ್ತು ಯಾದಗಿರಿ (ಶೇ. 10.3), ಧಾರವಾಡ (ಶೇ. 10.1), ವಿಜಯಪುರ (ಶೇ. 9.6), ಬೀದರ್ (ಶೇ. 9.1), ಬಾಗಲಕೋಟೆ (ಶೇ. 8.7), ಕೋಲಾರ (ಶೇ. 8.1), ಕೊಪ್ಪಳ (ಶೇ. 7.9), ಉತ್ತರ ಕನ್ನಡ (ಶೇ. 7.6), ಬಳ್ಳಾರಿ ಮತ್ತು ಕಲಬರುಗಿ (ಶೇ. 4.6), ದಕ್ಷಿಣ ಕನ್ನಡ (ಶೇ. 4.2) ಸೋಂಕು ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿದೆ.