ಬೆಂಗಳೂರು : ನಗರದಲ್ಲಿ ಕರೊನಾ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಕ್ಕೆ ನಿಯೋಜಿಸಿಕೊಂಡಿದ್ದ ಆಂಬುಲೆನ್ಸ್‌ಗಳ ಸಂಖ್ಯೆ ಕಡಿತ ಮಾಡಲು ಬಿಬಿಎಂಪಿ ಮುಂದಾಗಿದೆ. ರಾಜಧಾನಿಯಲ್ಲಿ ಜುಲೈನಿಂದ ಅಕ್ಟೋಬರ್ ಆರಂಭದವರೆಗೂ ಪ್ರತಿನಿತ್ಯ 3ರಿಂದ 5 ಸಾವಿರ ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು, ಆರೈಕೆ ಕೇಂದ್ರಕ್ಕೆ ಕರೆದೊಯ್ಯಲು ಹಾಗೂ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲು 729 ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಸೋಂಕಿತರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 429ಕ್ಕೆ ಇಳಿಕೆಯಾಗಲಿವೆ.
ಪಾಲಿಕೆಯ 8 ವಲಯಗಳಿಂದ ಜಂಟಿ ಆಯುಕ್ತರು ಮತ್ತು ವಲಯವಾರು ಕೋವಿಡ್ ನಿರ್ವಹಣೆಗೆ ನಿಯೋಜಸಿರುವ ಸಂಯೋಜಕ ಅಧಿಕಾರಿಗಳಿಂದ ಆಂಬುಲೆನ್ಸ್ ಅಗತ್ಯದ ಬಗ್ಗೆ ಮಾಹಿತಿ ಕೇಳಲಾಗಿತ್ತು. ಈಗ ಎಲ್ಲ ವಲಯಗಳಿಂದ ವರದಿ ಬಂದಿದ್ದು, ಅದರನ್ವಯ 429 ಆಂಬುಲೆನ್ಸ್ ಒದಗಿಸಲು ಟೆಂಡರ್ ಕರೆಯಲು ಸಿದ್ಧಗೊಳಿಸಿದೆ. ತುರ್ತು ಜೀವರಕ್ಷಕ ಸಾಧನ (ಎಎಲ್‌ಎಸ್) ಒಳಗೊಂಡ ಆಂಬುಲೆನ್ಸ್‌ಗೆ 1.40 ಲಕ್ಷ ರೂ. ಮಾಸಿಕ ಬಾಡಿಗೆ ನಿಗದಿ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಶೇ.25 ಹೆಚ್ಚಳಕ್ಕೆ ಅವಕಾಶ : ಬಿಬಿಎಂಪಿ ವತಿಯಿಂದ 429 ಆಂಬುಲೆನ್ಸ್ ಪಡೆಯಲು ಸಿದ್ಧಗೊಂಡ ಟೆಂಡರ್‌ನಲ್ಲಿ, ಶೇ.25 ಆಂಬುಲೆನ್ಸ್ ಹೆಚ್ಚಳ ಮಾಡಲು ಅವಕಾಶವಿದೆ. ನಗರದಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ಅಥವಾ ಹೆಚ್ಚಿನ ಸೋಂಕಿತ ಪ್ರಕರಣ ವರದಿಯಾದಲ್ಲಿ ಹೆಚ್ಚು ಆಂಬುಲೆನ್ಸ್ ಸೇವೆ ಪಡೆಯಲಾಗುವುದು ಎಂದು ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.