ಜಿಲ್ಲೆ

ಸೌಜನ್ಯ ಕೊಂದವರಿಗೆ ಕಠಿಣ ಶಿಕ್ಷೆಯಾಗಲು ಸರ್ಕಾರ ಕ್ರಮ ವಹಿಸಲಿ

ಬೆಳಗಾವಿ: ಧರ್ಮಸ್ಥಳ ಪಾಂಗಳದ ಸೌಜನ್ಯಳ ಅತ್ಯಾಚಾರ, ಕೊಲೆ ಅರೋಪಿಗಳ ಪತ್ತೆ ಮಾಡಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಒಳಗೊಂಡ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಬೇಕು. ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಅಸಹಜ ಸಾವು, ಕೊಲೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಪ್ರಗತಿಪರ ಸಂಘಟನೆಗಳ ಹೋರಾಟಗಾರರ ವೇದಿಕೆ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟಿಸಿದರು.

ನಗರದ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಪ್ರಕರಣದ ನೈಜ ಆರೋಪಿಯನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿದರು. ರವಿ ಪೂಜಾರಿ, ವಾರಿಜಾ ಆಚಾರಿ ಮೊದಲಾದ ಸಾಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದನ್ನು ವಿಶೇಷ ತನಿಖಾ ದಳದಿಂದ ತನಿಖೆ ನಡೆಸಬೇಕು. ಅಪರಾಧಿಗಳನ್ನು ಪತ್ತೆ ಮಾಡಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಯಾವುದೇ ಪ್ರಭಾವಕ್ಕೆ ಒಳಗಾಗದೆ ಸರ್ಕಾರ ಈ ಬಗ್ಗೆ ತನ್ನ ಬದ್ಧತೆ ಎತ್ತಿ ಹಿಡಿಯಬೇಕು. ಕರ್ತವ್ಯಲೋಪ ಎಸಗಿದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆ ನಡೆಸಿ ಅಪರಾಧಿಗಳನ್ನು ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ನಡೆಸಲು ಗೃಹಮಂತ್ರಾಲಯ ನಿಗದಿಪಡಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಸ್ಟೀಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲು ಬದ್ಧತೆ ತೋರಿಸಬೇಕು ಎಂದು ಒತ್ತಾಯಿಸಿದರು. ಸುಶೀಲಾ ವಿ., ಪ್ರಕಾಶ ಎಂ.,ಅನ್ನಪೂರ್ಣಾ ಬಿ., ಸ್ಟಾೃನ್ಲಿ, ಸಿದ್ದಪ್ಪ ಹುಕ್ಕೇರಿ, ಆನಂದ ಕಾಂಬಳೆ, ರಾಣಿ ನಡುವಿನಕೇರಿ ಇತರರಿದ್ದರು.