ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಸಂಜೆ ವಿವಿಧ ಒಕ್ಕಲಿಗ ಸಂಘಟನೆಗಳ ವತಿಯಿಂದ ಮೇಣದಬತ್ತಿ ಮೆರವಣಿಗೆ ನೆರವೇರಿತು.
ಅರಮನೆ ಮುಂಭಾಗದಿಂದ ಗಾಂಧಿ ವೃತ್ತದವರೆಗೆ ಕೈಯಲ್ಲಿ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡು ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದರು.
2012ರ ಅಕ್ಟೋಬರ್‌ನಲ್ಲಿ ಪ್ರಕರಣ ನಡೆದಿದೆ. ಈಗ ರಾಷ್ಟ್ರವ್ಯಾಪಿ ಸುದ್ದಿಯೂ ಆಗುತ್ತಿದೆ. ಪೊಲೀಸರು ಬಂಧಿಸಿದ್ದ ಪ್ರಕರಣದ ಆರೋಪಿ ಸಂತೋಷ್ ರಾಜ್ ಅಪರಾಧಿಯಲ್ಲ ಎಂದು ಸೌಜನ್ಯಾಳ ಪಾಲಕರು ಹೇಳುತ್ತಿದ್ದರೂ ಆತನನ್ನೇ ಕೇಂದ್ರಿಕರಿಸಿ ತನಿಖೆ ನಡೆಸಲಾಯಿತು. ನ್ಯಾಯಾಲಯ ಆತ ನಿಜವಾದ ಆರೋಪಿಯಲ್ಲ ಎಂದು ಹೇಳಿದೆ. ಹೀಗಿರುವಾಗ ನಿಜವಾದ ಆರೋಪಿಗಳು ಬೇರೆ ಯಾರೋ ಇರಲೇಬೇಕು. ಆದ್ದರಿಂದ ಮರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ಮುಖಂಡರಾದ ಕೆ.ವಿ.ಶ್ರೀಧರ್, ಮಹದೇವು, ಪ್ರೇಮಾ ಶಂಕರೇಗೌಡ, ಸುಶೀಲಾ ನಂಜಪ್ಪ, ರಾಜ್‌ಕುಮಾರ್, ಸತೀಶ್‌ಗೌಡ, ಗಿರೀಶ್ ಗೌಡ, ಹರೀಶ್ ಗೌಡ, ಲಕ್ಷ್ಮೀದೇವಿ ಇತರರಿದ್ದರು.