ಎಚ್.ಡಿ.ಕುಮಾರಸ್ವಾಮಿ  
ಜಿಲ್ಲೆ

ನ್ಯಾಯಾಲಯ ತೀರ್ಪು ವ್ಯತಿರಿಕ್ತ ಹಿನ್ನೆಲೆ ನಿವೇಶನ ವಾಪಸ್: ಎಚ್.ಡಿ.ಕುಮಾರಸ್ವಾಮಿ ಟೀಕೆ

ಮೈಸೂರು: ಮುಡಾ ನಿವೇಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್ ಮಾಡಿದ್ದಾರೆಯೇ ವಿನಾ, ಅವರ ಮನೆಯ ನಿವೇಶನ ನೀಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವರಾದ ಬಳಿಕ ಎರಡನೇ ಬಾರಿ ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು, ನವರಾತ್ರಿಯ ಕೊನೆಯ ದಿನ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯ ಅವರು ಮುಡಾದಿಂದ ಪಡೆದಿದ್ದ 15 ನಿವೇಶನಗಳನ್ನು ವಾಪಸ್ ಮಾಡಿದ್ದಾರೆಯೇ ವಿನಾ, ಅವರ ಮನೆಯದನ್ನು ವಾಪಸ್ ಮಾಡಿಲ್ಲ. ಅದು ಸರ್ಕಾರಕ್ಕೆ ಮೋಸ ಮಾಡಿ ತೆಗೆದುಕೊಂಡಿದ್ದರು. ನ್ಯಾಯಾಲಯದಲ್ಲಿ ಪರಿಸ್ಥಿತಿ ಯಾವಾಗ ವ್ಯತಿರಿಕ್ತವಾಗಿ ಬಂತೋ ಆಗ ನಿವೇಶನವನ್ನು ಕೊಟ್ಟಿದ್ದೇವೆ ಅಂತ ತೋರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಯಾರ ನಿವೇಶನ ಹೇಗೆ ಬಂತು ಎನ್ನುವುದು, ಸಿದ್ದರಾಮಯ್ಯ ಅವರು ಹೇಗೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹಿನಕಲ್ ಸಾಕಮ್ಮ ಅವರನ್ನು ಕೇಳಿ ಗೊತ್ತಾಗುತ್ತದೆ ಎಂದು ಹೇಳಿದರು.
ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸಿಕೊಂಡಿದ್ದಾರೆ. ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್, ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮಾಧ್ಯಮದಲ್ಲಿ ದೊಡ್ಡದಾಗಿ ಜಾಹೀರಾತು ಹಾಕಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತೇವೆ, ಎಸ್‌ಐಟಿ ರಚನೆ ಮಾಡುತ್ತೇವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದಕ್ಕೆ ನನ್ನದೇನು ತಕರಾರು ಇಲ್ಲ ಎಂದರು.
ಆದರೆ ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್ ಸಮಯದಲ್ಲಿ ಆದಂತಹ ವೈಫಲ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಂತಹ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸಿ 15 ತಿಂಗಳು ಕಡೆದರೂ ಮಾಡದಂತಹ ತನಿಖೆಯನ್ನು ಈಗ ತರಾತುರಿಯಲ್ಲಿ ಮಾಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ತಾಯಿ ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆದು, ನಾಡಿನ ಜನತೆಗೆ ಒಳ್ಳೆಯದಾಗಲು ಮತ್ತು ಬಡವರ ಪರವಾಗಿ ಉತ್ತಮ ಕೆಲಸವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ಶಕ್ತಿ ನೀಡುವಂತೆ ಕೇಳಿದ್ದೇನೆ ಎಂದರು.