ಶಹಾಪುರ: ನ್ಯಾಯಾಧೀಶರು, ಸಿಬ್ಬಂದಿ ಹಾಗೂ ಕಲಾಪಕ್ಕೆ ಆಗಮಿಸಿದ ವಕೀಲರು ಸೇರಿ ನ್ಯಾಯಾಲಯ ಆವರಣದಲ್ಲಿ ಸೋಮವಾರ ಥರ್ಮಲ್ ಸ್ಕ್ರೀನಿಂಗ್ ಮೂಲಕ 109 ಜನರ ಜ್ವರ ತಪಾಸಣೆ ಮಾಡಿಸಲಾಯಿತು.
ಮಾರ್ಚ್ 24ಕ್ಕೆ ಲಾಕ್ಡೌನ್ ಆದ ಬಳಿಕ ನ್ಯಾಯಾಲಯ ಕಲಾಪ ಸ್ಥಗಿತಗೊಂಡಿತ್ತು. ಸೋಮವಾರ ಷರತ್ತುಬದ್ಧ್ದ ಮಾರ್ಗಸೂಚಿ ನಿಯಮದಂತೆ ಕಲಾಪ ನಡೆಯಿತು. 20 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು ಎಂದು ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ ತಿಳಿಸಿದರು.
ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಭಾಮಿನಿ ಮಾತನಾಡಿ, ಯಾವುದೇ ಕಾರಣಕ್ಕೂ ನ್ಯಾಯಾಲಯ ಆವರಣದಲ್ಲಿ ಕಕ್ಷಿದಾರರನ್ನು ಕರೆತರಬಾರದು. ವಕೀಲರು ತಮ್ಮ ಕೆಲಸ ಮುಗಿದ ತಕ್ಷಣ ವಾಪಸ್ ಹೋಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಆಗಾಗ್ಗೆ ಸ್ಯಾನಿಟೈಸರ್ ಬಳಸಬೇಕು. ಸ್ವಚ್ಛತೆ ಹಾಗೂ ಸುರಕ್ಷತೆ ಎಲ್ಲರ ಹೊಣೆಯಾಗಿದೆ. ಕರೊನಾ ನಿಯಂತ್ರಣಕ್ಕೆ ತರಲು ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ನ್ಯಾಯಾಲಯ ಆವರಣದಲ್ಲಿ ಸ್ವಚ್ಛತೆ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ನ್ಯಾಯಾಲಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನವಶ್ಯಕವಾಗಿ ಅಲೆದಾಡಬಾರದು ಎಂದು ಸೂಚಿಸಿದರು.
ಹಿರಿಯ ವಕೀಲರಾದ ಭಾಸ್ಕರರಾವ್ ಮುಡಬೂಳ, ಶ್ರೀನಿವಾಸರಾವ ಕುಲಕರ್ಣಿ, ಎಸ್.ಶೇಖರ. ಚಂದ್ರಶೇಖರ ದೇಸಾಯಿ, ಆರ್.ಎಂ. ಹೊನ್ನಾರಡ್ಡಿ, ಸೈಯದ್ ಇಬ್ರಾಹಿಂಸಾಬ್ ಜಮಾದಾರ್, ವಿಶ್ವನಾಥರಡ್ಡಿ ಸಾಹು, ಸಾಲೋಮನ್ ಅಲ್ಫ್ರೈಡ್, ಶಾಂತಗೌಡ ಪಾಟೀಲ್, ಯುಸೂಫ್ ಸಿದ್ದಕಿ, ರಮೇಶ ಸೇಡಂಕರ್, ಮಲ್ಕಪ್ಪ ಪಾಟೀಲ್, ಎಚ್.ಆರ್. ಪಾಟೀಲ್, ಎಸ್.ಗೋಪಾಲ ಇತರರಿದ್ದರು.