ಜಿಲ್ಲೆ

ಕೊಲೆ ಬೆದರಿಕೆ ದೂರು ಸ್ವೀಕರಿಸದ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ

ಪುತ್ತೂರು: ಜಮೀನು ಲೀಸ್ ಗೆ ನೀಡಿದ ವಿಚಾರದಲ್ಲಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ಹಿರಿಯ ನಾಗರೀಕರಿಂದ ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸ್ ಇಲಾಖೆಗೆ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.

ಕುರಿಯ ಗ್ರಾಮದ ದೇರ್ಕಜೆ ವೆಂಕಟ್ರಮಣ ಭಟ್, ಸವಣೂರು ಗ್ರಾಮದ ಪಣೆಮಜಲು ನಿವಾಸಿ ಜಾಫರ್, ಬಪ್ಪಳಿಗೆ ನಿವಾಸಿ ಸುಭಾಶ್ ರೈ ಆರೋಪಿಗಳು. ಇವರು ಹಿರಿಯ ನಾಗರಿಕೆ, ಕಡಬ ತಾಲೂಕಿನ ಸವಣೂರು ಗ್ರಾಮದ ಸೋಂಪಾಡಿ ನಿವಾಸಿ ನಾಗರತ್ನಮ್ಮ (81 ವರ್ಷ) ಅವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಅಲ್ಲಿದ್ದ ೨ ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಕೋಳಿ ಹಾಗೂ ಆಡು ಸಾಕಿಕೊಂಡಿದ್ದ ದೊಡ್ಡ ಶೆಡ್ಡನ್ನು ಜೆಸಿಬಿಯಲ್ಲಿ ಕೆಡವಿ ಹಾಕಿದ್ದರು ಎಂದು ಆರೋಪಿಸಿದ್ದರು.

ಈ ಘಟನೆಯ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ದೂರು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ನಾಗರತ್ನಮ್ಮ ಅವರು ನ್ಯಾಯಾಲಯದ ಕದ ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.