ಜಿಲ್ಲೆ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ; 13 ರೈತರು ನಿರ್ದೋಷಿ

ರಾಣೆಬೆನ್ನೂರ: ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ರೈತರ ಮೇಲೆ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ 13 ಜನ ರೈತರು ನಿರ್ದೋಷಿಗಳು ಎಂದು ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ದರಾಜು ಮಂಗಳವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಮಾಕನೂರ ಗ್ರಾಮದ ಬ್ಯಾಂಕ್‌ವೊಂದರ ಎದುರು ರೈತರು ಓಟಿಎಸ್‌ಗಾಗಿ (ಒನ್ ಟೈಮ್ ಸೆಟ್ಲಮೆಂಟ್) ಸೌಲಭ್ಯಕ್ಕಾಗಿ ಆಗ್ರಹಿಸಿ 2022ರಲ್ಲಿ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದರು. ಅಲ್ಲದೆ ಒಬ್ಬ ರೈತ ಓಟಿಎಸ್ ಸೌಲಭ್ಯ ಸಿಗಲಿಲ್ಲ ಎಂದು ಸಾಲಬಾಧೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಆಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ರೈತರು ಬ್ಯಾಂಕ್ ಎದುರು ರೈತನ ಶವವಿಟ್ಟು ಭಾರಿ ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರೂ ರೈತರು ಮಾತ್ರ ರೈತನ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಪೊಲೀಸರು ರವೀಂದ್ರಗೌಡ ಪಾಟೀಲ ಸೇರಿ 13 ಜನ ರೈತರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ. ಸಿದ್ದರಾಜು ಅವರು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿಗಳನ್ನು ನಿರ್ದೋಷಿ ಎಂದು ಘೋಷಿಸಿ ತೀರ್ಪು ನೀಡಿದ್ದಾರೆ. ರೈತ ಹೋರಾಟಗಾರ ಪರವಾಗಿ ವಕೀಲ ನಾಗರಾಜ ಕುಡುಪಲಿ ವಾದ ಮಂಡಿಸಿದ್ದರು.
ನ್ಯಾಯಾಲಯ ತಮ್ಮನ್ನು ನಿರ್ದೋಷಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ರೈತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಪ್ರಮುಖರಾದ ಈರಣ್ಣ ಮಾಕನೂರ, ರವೀಂದ್ರಗೌಡ ಪಾಟೀಲ, ಎಸ್.ಡಿ. ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.