ವಿಟ್ಲ: ಬಂಟ್ವಾಳ ಸಿವಿಲ್ ನ್ಯಾಯಾಲಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಸಿಕೊಂಡು ನೋಟಿಸ್ ಜಾರಿ ಮಾಡಿದೆ.
ವಿಟ್ಲ ಅಪ್ಪರಿಪಾದೆಯಲ್ಲಿ ಹೊನ್ನಮ್ಮ ಎಂಬುವರು ೧೯೯೪ರಲ್ಲಿ ಸರ್ಕಾರದ ವಿರುದ್ಧ ವ್ಯಾಜ್ಯ ದಾಖಲಿಸಿ, ಕಸ್ಬಾ ಗ್ರಾಮದ ಸರ್ವೇ ನಂ.೬೦೩/೧ಎ೨ಎ೧ರಲ್ಲಿ ೪.೧೨ ಎಕರೆ ಜಮೀನಿಂದ ಬಲವಂತದಿಂದ ಒಕ್ಕಲೆಬ್ಬಿಸದಂತೆ ಹಾಗೂ ಜಮೀನಿನ ಬಗ್ಗೆ ಯಾವುದೇ ದಾಖಲೆ ಮಾಡದಂತೆ ಶಾಶ್ವತ ಪ್ರತಿಬಂಧಕಾಜ್ಞೆ ಆದೇಶ ಪಡೆದಿದ್ದರು. ಈ ಆದೇಶ ಉಲ್ಲಂಘಿಸಿ ೨೦೨೪ ಅ.೧೬ರಂದು ೧.೮೮ಎಕರೆ ಜಮೀನನ್ನು ಸರ್ಕಾರದ ಅಽಸೂಚನೆಯಂತೆ ಎಫ್‌ಎಸ್‌ಟಿಪಿ ಪ್ಲಾಂಟ್ ನಿರ್ಮಿಸಲು ಕಾಯ್ದಿರಿಸಿ ವಿಟ್ಲ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು.
ಈ ರೀತಿ ದಾಖಲೆ ಮಾಡಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದು ಮೃತ ಹೊನ್ನಮ್ಮ ಅವರ ವಾರಸುದಾರರಾದ ವೆಂಕಪ್ಪ ನಾಕ್ ಅವರು ವಕೀಲ ಸುದರ್ಶನ ಕುಮಾರ್ ಮುಳಿಯ ಮೂಲಕ ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ಜಿಲ್ಲಾಽಕಾರಿ ಮುಲ್ಲೈ ಮುಗಿಲನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.