ಜಿಲ್ಲೆ

ನ್ಯಾಯಾಲಯ ತೀರ್ಪು ಐತಿಹಾಸಿಕ

ಬೆಳಗಾವಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ನೀಡಿದ ತೀರ್ಪು ಐತಿಹಾಸಿಕ. ಅಲ್ಲದೆ, ‘ಸತ್ಯಕ್ಕೇ ಜಯ’ ಎಂಬ ಶ್ರೀರಾಮನ ಧ್ಯೇಯವಾಕ್ಯಕ್ಕೆ ಪೂರಕವಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹರ್ಷ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ತೀರ್ಪು ಸ್ವಾಗತಿಸಿ ಮಾತನಾಡಿದ ಅವರು, ಸತ್ಯ ಎಂದಿಗೂ ಸತ್ಯವೇ. ಬಿಜೆಪಿ ಇದನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಿತ್ತು. ಸದ್ಯ ನ್ಯಾಯ ದೇವತೆಯೂ ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ ಎಂದರು.

ನಮ್ಮ ಹಿರಿಯ ಮುತ್ಸದ್ದಿ ನಾಯಕ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣಸಿಂಗ್, ಉಮಾ ಭಾರತಿ, ವಿನಯ ಕಟಿಯಾರ್ ಮುಂತಾದವರನ್ನುಈ ಪ್ರಕರಣದಲ್ಲಿ ಸಿಲುಕಿಸಲು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಹುನ್ನಾರ ನಡೆದಿತ್ತು. ಆದರೆ, ಈ ನ್ಯಾಯ ನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ. ಆರೋಪಿತ ಸ್ಥಾನದಲ್ಲಿದ್ದ ಬಿಜೆಪಿಯ ಹಿರಿಯ ಮುಖಂಡರಿಗೆ ವಿನಾಕಾರಣ ಮಾನಸಿಕ ಕಿರುಕುಳ ನೀಡುವ ಉದ್ದೇಶ ಹೊಂದಿದ್ದ ಕೆಲ ರಾಜಕೀಯ ಶಕ್ತಿಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ತಕ್ಕ ಶಾಸ್ತಿ ಮಾಡಿದೆ ಎಂದರು.

ಪ್ರಾಮಾಣಿಕ ಸೇವೆ ಮತ್ತು ಆದರ್ಶಮಯ ಆಡಳಿತಕ್ಕೆ ನಮ್ಮಲ್ಲಿ ರಾಮರಾಜ್ಯ ಎಂದು ಕರೆಯುವುದು ರೂಢಿ. ಇತ್ತೀಚೆಗೆ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಈಗ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ನೀಡಲಾದ ತೀರ್ಪು ಸಹ ರಾಮರಾಜ್ಯದ ಪರಿಕಲ್ಪನೆಗೆ ಪೂರಕವಾಗಿಯೇ ಇದೆ. ಅನೇಕ ಮುಖಂಡರು, ಸಾಧುಸಂತರು, ಕರಸೇವಕರು, ಶ್ರೀರಾಮನ ಭಕ್ತರು ಮತ್ತು ಬಿಜೆಪಿಯ ಸಮಸ್ತರೂ ಹಲವು ವರ್ಷಗಳಿಂದ ನಡೆಸಿದ್ದ ಹೋರಾಟಗಳಿಗೆ ಈ ತೀರ್ಪು ಮೌಲ್ಯ ಹೆಚ್ಚಿಸಿದೆ. ಉತ್ತಮ ಮತ್ತು ಸತ್ಯಪರ ತೀರ್ಪು ನೀಡಿದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ವಂದನೆ ತಿಳಿಸುವುದಾಗಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ತೀರ್ಪು ಸತ್ಯಕ್ಕೆ ಲಭಿಸಿದ ಜಯವಾಗಿದೆ. ಬಿಜೆಪಿ ಪ್ರಮುಖ ನಾಯಕ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಸೇರಿದಂತೆ ಎಲ್ಲ 32 ಜನರನ್ನೂ ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ಮೇಲಿನ ವಿಶ್ವಾಸ ಇನ್ನೂ ಹೆಚ್ಚಾಗಿದೆ. | ಸಂಜಯ ಪಾಟೀಲ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ನೀಡಿರುವ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ. ನಮ್ಮ ಎಲ್ಲ ಹಿರಿಯ ನಾಯಕರು ಸೇರಿದಂತೆ 32 ಜನ ದೋಷಮುಕ್ತರಾಗಿದ್ದಾರೆ. ಕೋರ್ಟ್ ತೀರ್ಪು ಸ್ವಾಗತಿಸಿ, ನಮ್ಮ ಪಕ್ಷದ ಹಿರಿಯರಿಗೆ ಅಭಿನಂದಿಸುತ್ತೇನೆ. | ಶಂಕರಗೌಡ ಪಾಟೀಲ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ