ಜಿಲ್ಲೆ

ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಎ. ಆರ್. ರಘುರಾಮ

ಜಿಲ್ಲಾ ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟ
ಮಂಡ್ಯ: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಿದ್ದ ಅಪರಾಧಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಎರಡೂವರೆ ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮಳವಳ್ಳಿ ತಾಲೂಕು ಬೆಳಕವಾಡಿ ಗ್ರಾಮದ ಲೇ.ಲಿಂಗಪ್ಪ ಅವರ ಪುತ್ರ ಮಹದೇವಸ್ವಾಮಿ (48) ಶಿಕ್ಷೆಗೊಳಗಾದವ. ಬೆಳಕವಾಡಿ ಗ್ರಾಮದ ಗೀತಾ ಅವರನ್ನು ಅದೇ ಗ್ರಾಮದ ಮಹದೇವಸ್ವಾಮಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಮೂರು ವರ್ಷ ಅನ್ಯೋನ್ಯವಾಗಿದ್ದ ದಂಪತಿ, ನಂತರದಲ್ಲಿ ಬಿರುಕು ಮೂಡಿ ಗೀತಾ ಅವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ.
2020ರ ಫೆ.21ರ ರಾತ್ರಿ 9ರ ಸಮಯದಲ್ಲಿ ಅಡುಗೆ ಮಾಡುವ ವಿಚಾರದಲ್ಲಿ ಗೀತಾ ಅವರೊಂದಿಗೆ ಜಗಳ ತೆಗೆದು ಆಕೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನು ನೋಡಿದ ಅಕ್ಕಪಕ್ಕದ ನಿವಾಸಿಗಳು ಗೀತಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ವೈದ್ಯರ ಸಮಕ್ಷಮ ಗಾಯಾಳು ಗೀತಾ ನೀಡಿದ್ದ ಹೇಳಿಕೆಯನ್ನು ದಾಖಲಿಸಿಕೊಂಡ ಅಂದಿನ ವೃತ್ತ ನಿರೀಕ್ಷಕರಾದ ಧರ್ಮೇಂದ್ರ ಹಾಗೂ ಧನರಾಜ್ ತನಿಖೆ ನಡೆಸಿ 2020ರ ಜೂ.3ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಮಹದೇವಸ್ವಾಮಿ ತಪ್ಪಿತಸ್ಥನೆಂದು ಪರಿಗಣಿಸಿ ಶಿಕ್ಷೆ ಆದೇಶ ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ವೀಣಾ ಮತ್ತು ವಿಜಯಲಕ್ಷ್ಮೀ ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.