ಜಿಲ್ಲೆ

ಜಿಲ್ಲೆಯಲ್ಲಿ 2242 ಪ್ರಕರಣ ಇತ್ಯರ್ಥ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಮಂಡ್ಯ: ಜಿಲ್ಲೆಯ ಏಳು ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದ 3038 ಪ್ರಕರಣಗಳ ಪೈಕಿ 2242 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಶೇ.70ರಷ್ಟು ಸಾಧನೆ ಮಾಡಲಾಗಿದೆ. ಈ ಮೂಲಕ ಕಂದಾಯ ಇಲಾಖೆಯಲ್ಲಿರುವ ರೈತರ ವಿವಿಧ ಪ್ರಕರಣಗಳನ್ನು ಇತ್ಯರ್ಥ ಮಾಡುವುದರ ಜತೆಗೆ ಇ-ಆಫೀಸ್ ತಂತ್ರಾಂಶದ ಮೂಲಕ ಕಡತ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿದ್ದ ಒಟ್ಟು 3150 ಪ್ರಕರಣಗಳ ಪೈಕಿ 2027 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಒಟ್ಟು 4258 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಜತೆಗೆ, ಆರ್‌ಸಿಎಂಸಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಈ ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.

ಸಭೆಗಳು, ವಿಡಿಯೋ ಕಾನ್ಫರೆನ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮದ ಕಾರಣ ನಿಯಮಿತವಾಗಿ ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ನಡೆಯುತ್ತಿರಲಿಲ್ಲ. ಕೆಲವು ರದ್ದು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಉಪ ವಿಭಾಗಾಧಿಕಾರಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ, ಪಾಂಡವಪುರ ಉಪ ವಿಭಾಗಾಧಿಕಾರಿಗೆ ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಹಾಗೂ ಜಿಲ್ಲೆಯ ಎಲ್ಲ ತಹಸೀಲ್ದಾರರು ಮಂಗಳವಾರ ಮತ್ತು ಗುರುವಾರದಂದು ಕಡ್ಡಾಯವಾಗಿ ನ್ಯಾಯಾಲಯದ ಕಲಾಪಗಳನ್ನು ನಡೆಸುವಂತೆ ಸುತ್ತೋಲೆ ಹೊರಡಿಸಲಾಗಿದ್ದು, ಪರಿಣಾಮ ಇಷ್ಟು ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

9821 ಆರ್‌ಟಿಸಿ ತಿದ್ದುಪಡಿ: ಜಿಲ್ಲೆಯಲ್ಲಿ 18179ಆರ್‌ಟಿಸಿ ತಿದ್ದುಪಡಿ ಬಾಕಿ ಉಳಿದಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 9821 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 8358 ಅರ್ಜಿಗಳು ಬಾಕಿ ಉಳಿದಿವೆ. ಅಂತೆಯೆ, ಪ್ರತಿ ವಾರ ಪೌತಿಖಾತಾ ಆಂದೋಲನ ನಡೆಸಿ 12937 ಅರ್ಜಿಗಳ ಪೈಕಿ 8417 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಪೌತಿ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ರೈತರು ತಾಲೂಕು ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕಿತ್ತು. ಇದರಿಂದ ಹಲವಾರು ಜನರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಹಸೀಲ್ದಾರರೇ ಗ್ರಾಮಗಳಿಗೆ ತೆರಳಿ ಪೌತಿಖಾತಾ ಆಂದೋಲನ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಇದರಿಂದಾಗಿ ಪೌತಿಖಾತಾ ಆಂದೋಲನ ಪರಿಣಾಮಕಾರಿಯಾಗಿ ನಡೆದಿದೆ ಎಂದು ವಿವರಿಸಿದರು.

ಇ-ಆಫೀಸ್‌ನಲ್ಲಿ ವಿಲೇವಾರಿ: ಆ.15ರಂದು ಮಂಡ್ಯ ತಾಲೂಕು ಕಚೇರಿ ಮತ್ತು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇ-ಆಫೀಸ್ ತಂತ್ರಾಂಶವನ್ನು ಉದ್ಘಾಟನೆ ಮಾಡಿದ್ದರು. ನಂತರದ ದಿನಗಳಲ್ಲಿ ಎಲ್ಲ ತಾಲೂಕು ಮತ್ತು ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಅಳವಡಿಸಲಾಯಿತು. ಇದರಿಂದಾಗಿ 2,78,322 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಮ್ಮ ಭೂಮಿ ತಂತ್ರಾಂಶದಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 141 ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. 8 ಗ್ರಾಮಗಳನ್ನು ಮಾತ್ರ ಕಂದಾಯ ಗ್ರಾಮಗಳನ್ನಾಗಿ ಮಾಡಬೇಕಿದ್ದು, ಶೀಘ್ರದಲ್ಲೇ ಎಲ್ಲವನ್ನೂ ಮಾಡಲಾಗುವುದು. ಹೃದಯ ವೈಶಾಲ್ಯ ಯೋಜನೆಯಡಿ 35 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ಯಂತ್ರಗಳನ್ನು ಅಳವಡಿಸಿದ್ದು, ಇದರಲ್ಲಿ 1128 ಮಂದಿಗೆ ಹೃದಯ ತಪಾಸಣೆ ನಡೆಸಲಾಗಿದೆ. 960 ಮಂದಿ ಹೃದಯ ಸಹಜ ಸ್ಥಿತಿಯಲ್ಲಿರುವವರು ಮತ್ತು 168 ಮಂದಿಗೆ ಹೆಚ್ಚಿನ ತಪಾಸಣೆಗೆ ಒಳಗಾಗಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿ 22780 ಮಂದಿಗೆ ಮ್ಯಾಪಿಂಗ್ ಮಾಡಲಾಗಿದೆ. 193 ಮಂದಿ ವಿವಿಧ ಕಾರಣಗಳಿಂದಾಗಿ ಮಾಡಲಾಗಿಲ್ಲ. ಶೀಘ್ರ ಅವುಗಳನ್ನು ಸರಿಪಡಿಸಿ ಪಿಂಚಣಿ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಲಾಗುವುದು. ಬರಪೀಡಿತ ತಾಲೂಕುಗಳನ್ನು ಘೋಷಿಸಿದ ಬಳಿಕ ಪರಿಹಾರ ವಿತರಣೆಗೆ ರೈತರಿಗೆ ಫ್ರೂಟ್‌ಐಡಿ ನೋಂದಣಿಗೆ ಸೂಚನೆ ನೀಡಲಾಗಿದ್ದು, ಈಗಾಗಲೇ ಶೇ. 61ರಷ್ಟು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದನ್ನು ವಿಶೇಷ ಆಂದೋಲದ ಮಾದರಿಯಲ್ಲಿ 16,669 ರೈತರನ್ನು ನೋಂದಣಿ ಮಾಡಲಾಗಿದೆ ಎಂದು ವಿವರಿಸಿದರು.

ಜಿ.ಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದ್ದರು.