ಜಿಲ್ಲೆ

ಸ್ಕೂಟಿಯಲ್ಲಿ ಕುಕ್ಕೆಯಿಂದ ತಿರುಪತಿಗೆ ದಂಪತಿ ಯಾತ್ರೆ : 1094 ಕಿ.ಮೀ. ದೂರ ಸವಾರಿಗೆ ಬರೀ 3 ದಿನ ಹಗಲು-ರಾತ್ರಿ ಪ್ರಯಾಣ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿ ಎ.ಸುಬ್ರಹ್ಮಣ್ಯ ರಾವ್ ಪತ್ನಿ ಸವಿತಾ ರಾವ್ ಅವರೊಂದಿಗೆ ಸ್ಕೂಟಿಯಲ್ಲಿ ಕುಕ್ಕೆಯಿಂದ ತಿರುಪತಿಗೆ ಯಾತ್ರೆ ಕೈಗೊಂಡು ಕ್ಷೇತ್ರ ದರ್ಶನ ಮಾಡಿ ಬಂದಿದ್ದಾರೆ. 

ಕುಕ್ಕೆ ಸುಬ್ರಹ್ಮಣ್ಯದಿಂದ ಸ್ಕೂಟಿಯಲ್ಲಿ ಹೊರಟು ಎಲ್ಲಿಯೂ ವಿಶ್ರಾಂತಿ ತೆಗೆದುಕೊಳ್ಳದೆ 1094 ಕಿ.ಮೀ ದೂರವನ್ನು ಮೂರು ದಿನಗಳಲ್ಲಿ ಕ್ರಮಿಸಿರುವುದು ಇವರ ಸಾಹಸಕ್ಕೆ ಸಾಕ್ಷಿ. ಮುಂದೆ ಇಡೀ ಭಾರತವನ್ನು ದ್ವಿಚಕ್ರ ವಾಹನದಲ್ಲಿ ಸುತ್ತುವ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕುಕ್ಕೆ ಕ್ಷೇತ್ರದಿಂದ ಬೆಳಗ್ಗೆ 10 ಗಂಟೆಗೆ ಹೊರಟ ಇವರು ಮೂರನೇ ದಿನ ಮಧ್ಯಾಹ್ನ 3 ಗಂಟೆಗೆ ತಿರುಪತಿ ತಲುಪಿದ್ದಾರೆ. ಕುಕ್ಕೆಯಿಂದ ಹೊರಟು ರಾತ್ರಿ ಎಲ್ಲಿಯೂ ತಂಗದೆ ನಿದ್ರೆ, ವಿಶ್ರಾಂತಿ ಪಡೆಯದೆ ಪ್ರಯಾಣಿಸಿ ತಿರುಪತಿ ಸಂದರ್ಶನ ಮಾಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ವಿಶ್ರಾಂತಿ ಪಡೆದು ಅಲ್ಲಿ ದೇವರ ದರ್ಶನ ಮಾಡಿ ಬಳಿಕ ಕಾಳಹಸ್ತಿಗೆ ತೆರಳಿ ಅಲ್ಲಿಂದ ನೇರವಾಗಿ ಕುಕ್ಕೆಗೆ ದಂಪತಿ ಆಗಮಿಸಿದ್ದಾರೆ.

ವರ್ಷದಲ್ಲಿ ಅನೇಕ ಬಾರಿ ತಿರುಪತಿ ಯಾತ್ರೆ ಮಾಡುತ್ತೇನೆ. ಈ ಸಲ ಸ್ಕೂಟಿಯಲ್ಲಿ ತೆರಳಿ ದೇವರ ದರ್ಶನ ಮಾಡಿದ್ದು ತುಂಬ ಸಂತಸ ನೀಡಿದೆ. ಸ್ಕೂಟಿಯಲ್ಲಿ ಪ್ರಯಾಣಿಸಿ ಯಾತ್ರೆ ಸಂಪನ್ನಗೊಳಿಸಿದ ನಂತರವೂ ಯಾವುದೇ ರೀತಿಯ ಆಯಾಸವಾಗದೆ ಇರುವುದು ದೇವರ ವರವಾಗಿದೆ. ಮುಂದೆ ಸೈಕಲ್ಲಿನಲ್ಲಿ ಪುಣ್ಯ ಕ್ಷೇತ್ರಗಳ ಸಂದರ್ಶನ ಮಾಡಬೇಕೆನ್ನುವ ಆಸೆ ಇದೆ ಎ.ಸುಬ್ರಹ್ಮಣ್ಯ ರಾವ್ https://www.vijayavani.net/hindu-hita-rakshana-samiti-protest https://www.vijayavani.net/kilpadi-school-anniversary