ಜಿಲ್ಲೆ

ಪತ್ನಿಯ ಅಂತ್ಯಸಂಸ್ಕಾರಕ್ಕೆಂದು ಹಾಕಿದ್ದ ಶಾಮಿಯಾನ ಪೈಪ್‌ಗೇ ಪತಿ ನೇಣು

ಬೆಳ್ತಂಗಡಿ: ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಅಂತ್ಯ ಸಂಸ್ಕಾರ ಸ್ಥಳದಲ್ಲಿ ಹಾಕಿದ್ದ ಶಾಮಿಯಾನದ ಪೈಪ್‌ಗೆ ಮರುದಿನ ಪತಿಯೂ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ.

ಪತ್ನಿ ಚಂದ್ರಾವತಿ(49) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪತಿ ಶಿವಪ್ಪ ಗೌಡ(56)ಭಾನುವಾರ ಬೆಳಗಿನ ಜಾವ ನೇಣಿಗೆ ಶರಣಾಗಿದ್ದಾರೆ. ಚಂದ್ರಾವತಿ ಅವರು ಶನಿವಾರ ಮಧ್ಯಾಹ್ನ ಜಾನುವಾರಿಗೆ ಹುಲ್ಲು ತರಲೆಂದು ಮನೆಯಿಂದ ಹೋದವರು ಸಂಜೆಯಾದರೂ ಮರಳಿ ಬಂದಿರಲಿಲ್ಲ. ಹುಡುಕಾಟ ನಡೆಸಿದಾಗ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಪತಿಯ ಕುಡಿತದ ಚಟ, ವಾಸಿಯಾಗದ ಕಾಯಿಲೆ ಹಾಗೂ ಮಕ್ಕಳಾಗದ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಅವರ ಅಂತ್ಯಸಂಸ್ಕಾರ ಶನಿವಾರ ನಡೆದಿತ್ತು. ಈ ಸಂದರ್ಭ ಭಾರಿ ಮಳೆಯಿದ್ದ ಕಾರಣ ಅಂತ್ಯಸಂಸ್ಕಾರ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿತ್ತು. ಭಾನುವಾರ ಬೆಳಗ್ಗೆ ಶಾಮಿಯಾನದ ಪೈಪಿಗೆ ಶಿವಪ್ಪ ಗೌಡ ನೇಣುಬಿಗಿದುಕೊಂಡು ಸಾವನ್ನಪ್ಪಿ ರುವುದು ಪತ್ತೆಯಾಗಿದೆ.

ದಂಪತಿ ಮುಡಿಪಿರೆ ಎಂಬಲ್ಲಿ ತಾಯಿ ನಾಗಮ್ಮ ಅವರೊಂದಿಗೆ ವಾಸ್ತವ್ಯವಿದ್ದರು. ಈಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಒಬ್ಬಂಟಿಯಾಗಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.