ಬೆಂಗಳೂರು: ಐವರು ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮಗಳೊಬ್ಬಳನ್ನು ಹಾಗೇ ಬಿಟ್ಟು ಇಳಿದುಹೋಗಿದ್ದು, ಒಂದಷ್ಟು ಕಾಲ ಆತಂಕದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿತ್ತು. ಬೀದರ್-ಯಶವಂತಪುರ ಎಕ್ಸ್ಪ್ರೆಸ್ನಲ್ಲಿ ಗುರುವಾರ ರಾತ್ರಿ ಇಂಥದ್ದೊಂದು ಪ್ರಕರಣ ಸಂಭವಿಸಿದೆ.
ಬೀದರ್-ಯಶವಂತಪುರ ಎಕ್ಸ್ಪ್ರೆಸ್ ಟ್ರೇನ್ ನಂ. 06272ನಲ್ಲಿ ಸಂಗಪ್ಪ ಎಂಬವರು ತಮ್ಮ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ ರಾಜಾನುಕುಂಟೆ ಸಿಗ್ನಲ್ ಕ್ಲಿಯರೆನ್ಸ್ ಬಳಿ ಇಳಿಯುವಾಗ ಅಲ್ಲಿ ನಿದ್ರಿಸುತ್ತಿದ್ದ ತಮ್ಮ ಪುತ್ರಿ ಭೂಮಿಕಾಳನ್ನು ಜತೆ ಕರೆದೊಯ್ಯಲು ಮರೆತೇ ಹೋಗಿದ್ದರು.
ರೈಲಿನಿಂದ ಇಳಿದು ಬಂದ ಸ್ವಲ್ಪ ಹೊತ್ತಿನಲ್ಲಿ ಮಕ್ಕಳಲ್ಲಿ ಪುತ್ರಿಯೊಬ್ಬಳು ಇಲ್ಲದಿರುವುದು ಗೊತ್ತಾಗಿ ತೀವ್ರ ಗಾಬರಿ ಹಾಗೂ ಚಿಂತೆಗೆ ಒಳಗಾಗಿದ್ದರು. ಈ ಬಗ್ಗೆ 7 ಗಂಟೆ ಸುಮಾರಿಗೆ ರೈಲ್ವೆ ಸ್ಟೇಷನ್ ಮಾಸ್ಟರ್ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸ್ಟೇಷನ್ ಮಾಸ್ಟರ್ ಅವರು ಸೆಕ್ಯುರಿಟಿ ಕಂಟ್ರೋಲ್ಗೆ ಮಾಹಿತಿ ರವಾನಿಸಿದ್ದು, ಎಲ್ಲೆಡೆ ಹುಡುಕಾಟ ನಡೆಸುವಂತೆ ಆರ್ಪಿಎಫ್ಗೆ ಸೂಚಿಸಿದ್ದರು.
ಅಷ್ಟರಲ್ಲಿ ಬೀದರ್-ಯಶವಂತಪುರ ಎಕ್ಸ್ಪ್ರೆಸ್ 7.30ರ ಸುಮಾರಿಗೆ ಯಶವಂತಪುರ ಸ್ಟೇಷನ್ ತಲುಪಿತ್ತು. ಅಲ್ಲಿ ಕೋಚ್ ನಂಬರ್ ಎಸ್ಡಬ್ಲ್ಯುಆರ್ ಎಸ್ಸಿಎನ್ 201586/Cನ ಸೀಟ್ ನಂಬರ್ 3ರಲ್ಲಿ ಭೂಮಿಕಾ ಮಲಗೇ ಇದ್ದಿದ್ದು, ರೈಲ್ವೆ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು. ಬಳಿಕ ದಂಪತಿಯನ್ನು ಯಶವಂತಪುರಕ್ಕೆ ಕರೆಸಿ ಬಾಲಕಿಯನ್ನು ಹಸ್ತಾಂತರಿಸಲಾಗಿದೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ನ ತ್ವರಿತ ಕಾರ್ಯಾಚರಣೆ ಕುರಿತು ಡಿವಿಷನಲ್ ರೈಲ್ವೇ ಮ್ಯಾನೇಜರ್ ಅಶೋಕ್ ಕುಮಾರ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.