ಜಿಲ್ಲೆ

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಿಂದ ದೇಶಾಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸೇವೆಯನ್ನು ಮಾಡುತ್ತಿರುವ ಸೇವಾ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ತೊಡಗಿಕೊಂಡಿರುವುದು ಸಂತೋಷದಾಯಕ ಎಂದು ಎಸ್.ಡಿ.ಎಂ ಸಮೂಹ ಸಂಸ್ಥೆಗಳ ಯೋಜನಾ ನಿರ್ದೇಶಕ ಶ್ರೇಯಸ್‌ಕುಮಾರ್ ಧರ್ಮಸ್ಥಳ ತಿಳಿಸಿದರು.


ನಗರದ ವೈಷ್ಣವಿ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಸಿಬ್ಬಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಯಶಸ್ವಿ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರ ಕಾರ್ಯಚಟುವಟಿಕೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


ಪ್ರಧಾನಮಂತ್ರಿ ಅವರು ಬೀದರ್‌ನಲ್ಲಿ ನಡೆದ ಕ್ಷೀರಕ್ರಾಂತಿ ಮತ್ತು ಆಯುಷ್ಮಾನ್ ಭಾರತ ಯೋಜನೆಗೆ ನಮ್ಮ ಸಂಸ್ಥೆ ನೀಡಿರುವ ಕೊಡುಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಇದು ಮಾದರಿ ಯೋಜನೆ ಎಂದಿದ್ದಾರೆ. ಇದಕ್ಕಿಂತ ದೊಡ್ಡ ಸನ್ಮಾನ ನಮಗೆ ಬೇರೆ ಇಲ್ಲ. ನಮ್ಮೂರು ನಮ್ಮ ಕೆರೆ ಯೋಜನೆಯ ಬಗ್ಗೆ ಸಿಕ್ಕಿರುವ ಪ್ರಶಂಸೆ ಮತ್ತು ಗೌರವ ಅಪಾರವಾದದ್ದು. ಗ್ರಾಮೀಣ ಭಾಗದ ಜನರ ಕುಡಿಯುವ ನೀರು ಮತ್ತು ಕೃಷಿ ಯೋಜನೆಗಳಿಗೆ ಇದರಿಂದ ದೊಡ್ಡ ಲಾಭವಾಗಿದೆ ಎಂದರು.


ನಮ್ಮ ಪರಂಪರೆ, ಸಂಸ್ಕೃತಿ ಉಳಿಸುವ ಯೋಜನೆಗಳು, ಪಾಳು ಬಿದ್ದ ದೇವಸ್ಥಾನಗಳ ಮರುನಿರ್ಮಾಣ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಕ್ಕೆ ಕೊಡುಗೆ, ಶುದ್ಧ ಕುಡಿಯುವ ನೀರಿನ ಯೋಜನೆಗಳನ್ನು ನೀಡುವಲ್ಲಿ ಧರ್ಮಸ್ಥಳ ಸಂಸ್ಥೆ ಮುಂಚೂಣಿಯಲ್ಲಿದೆ. ಈ ಸಾಧನೆಯ ಬಹುಪಾಲು ಯಶಸ್ಸು ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು.


ಇಡೀ ಪ್ರಪಂಚದಲ್ಲಿ ವೈಯಕ್ತಿಕವಾಗಿ ಮಾಡುವ ವಿಮಾ ಯೋಜನೆ ನಮ್ಮದಾಗಿದೆ. ಸುಮಾರು 1.5 ಕೋಟಿ ಜನರಿಗೆ ಜೀವ ವಿಮೆ ಮತ್ತು 75 ಲಕ್ಷ ಜನರಿಗೆ ಆರೋಗ್ಯ ವಿಮೆ ಮಾಡಿಸಿ ಮಧ್ಯಮ ವರ್ಗದ ಜನರ ಜೀವನಕ್ಕೆ ಭದ್ರತೆ ಒದಗಿಸಿದೆ. ಖಾಸಗಿ ಸಂಸ್ಥೆಯೊಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿಮೆ ಮಾಡಿಸಿರುವುದು ರಾಷ್ಟ್ರ ಮಟ್ಟದಲ್ಲಿ ದಾಖಲೆ ಎಂದರು.


ಪ್ರಾದೇಶಿಕ ನಿರ್ದೇಶಕ ಜಯರಾಮ ಬಿ.ನೆಲ್ಲಿತ್ತಾಯ ಮಾತನಾಡಿ, ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 1,18,000 ಸ್ವಸಹಾಯ ಸಂಘಗಳಿವೆ. 10,02,000 ಸದಸ್ಯರಿದ್ದು, 524.40 ಕೋಟಿ ರೂ. ಉಳಿತಾಯ ಮಾಡಲಾಗಿದೆ ಎಂದರು.


ನೆಲ-ಜಲ ಸಂರಕ್ಷಣೆಗೆಗಾಗಿ 130 ಕೆರೆಗಳ ಅಭಿವೃದ್ಧಿ, 385 ಶಾಲೆಗಳಿಗೆ ಡೆಸ್ಕ್, ಬೆಂಚು ವಿತರಣೆ, 7,822 ವಿದಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ, 42 ವಯೋವೃದ್ಧರಿಗೆ ವಾತ್ಸಲ್ಯ ಮನೆ ನಿರ್ಮಾಣ, 3,635 ಸದಸ್ಯರಿಗೆ ಮಾಸಾಶನ ವಿತರಣೆ, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 10,90,011 ಸೌಲಭ್ಯಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹೆಗ್ಗಡೆ ಅವರ ಆಶಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯಕರ್ತರು ಈಡೇರಿಸುತ್ತಿದ್ದ್ದಾರೆ ಎಂದರು.


ಯೋಜನೆ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್ ನಾಗನಾಳ, ಮಮತಾ ಹರೀಶ್ ರಾವ್, ಮುರಳೀಧರ್, ಎಚ್.ಎಲ್.ಜಯಕರ ಶೆಟ್ಟಿ, ಕೇಶವ ದೇವಾಂಗ, ಎಂ.ಚೇತನಾ, ಲತಾ ಬಂಗೇರ, ಕೆ.ಚಿದಾನಂದ, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳು, ಸಿಬ್ಬಂದಿ ಇದ್ದರು.