ಜಿಲ್ಲೆ

ಸಮಾಜ ಆರ್ಥಿಕವಾಗಿ ಸಬಲವಾದರೆ ದೇಶದ ಮುನ್ನಡೆ ಸಾಧ್ಯ: ಎ.ಕೆ.ಮನುಮುತ್ತಪ್ಪ

ಮಡಿಕೇರಿ: ಸಮಾಜ ಆರ್ಥಿಕವಾಗಿ ಸಬಲವಾದರೆ ದೇಶ ಮುನ್ನಡೆಯೂ ಸ್ವಾಭಾವಿಕವಾಗಿ ಆಗುತ್ತದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಹೇಳಿದರು.


ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ. ಮಡಿಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಇತ್ತೀಚೆಗೆ ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ ಹಾಗೂ ಪಶುಪಾಲನೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಕೂಡ ಅಗ್ರಪಾಲು ಉತ್ಪಾದಕರ ರಾಜ್ಯಗಳ ಪೈಕಿ ಇದೆ. ಆದರೆ, ಕೊಡಗು ಕೇವಲ ಹಾಲಿನ ಮಾರಾಟ ಪ್ರದೇಶವಾಗಿದ್ದು ಹೈನೋದ್ಯಮ ಜಿಲ್ಲೆಯ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶೀಯ ಹಸು ತಳಿಗಳನ್ನು ಆರೋಗ್ಯ ಮತ್ತು ಔಷಧದ ಹಿತದೃಷ್ಟಿಯಿಂದ ಸಹ ಸಲಹುವವರು ಹೆಚ್ಚಾಗುತ್ತಿದ್ದಾರೆ. ಕೇವಲ ಹಾಲು ಮಾತ್ರ ಅಲ್ಲ ಸಗಣಿ ಮತ್ತು ಗೋಮೂತ್ರಕ್ಕೂ ಅತ್ಯಧಿಕ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ದವಸ ಭಂಡಾರಗಳು ಹಾಲು ಶೇಖರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದಲ್ಲಿ ರೈತರಿಗೂ ಉಪಯೋಗವಾಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ. ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳೂ ಸೇರಿದಂತೆ ಹಲವು ರೀತಿಯ ವಿಷಯಗಳ ಕುರಿತು ವಿಚಾರ ವಿನಿಮಯ, ವಿಷಯ ಮಂಡನೆಯ ಕೆಲವನ್ನಾದರೂ ಅನುಷ್ಠಾನಗೊಳಿಸಿದಲ್ಲಿ ಸಂಘವು ಮುನ್ನಡೆಯುತ್ತದೆ. ಸಮಾಜ ಆರ್ಥಿಕವಾಗಿ ಸಬಲವಾದರೆ ದೇಶ ಮುನ್ನಡೆಯೂ ಸ್ವಾಭಾವಿಕವಾಗಿ ಆಗುತ್ತದೆ ಎಂದು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಯೂನಿಯನ್ ಬ್ಯಾಂಕ್‌ನ ನಿರ್ದೇಶಕ ಎನ್.ಎ.ರವಿ ಬಸಪ್ಪ, ಸದಸ್ಯರ ಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದ ನಂತರ ತಮ್ಮ ಸಂಸ್ಥೆಗಳ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ದವಸದ ರೂಪದಲ್ಲಿ ವ್ಯವಹಾರ ನಡೆಸುತ್ತಿದ್ದ ಸಂಘಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯ ಕೋರಿದರು.


ಜಿಲ್ಲೆಯ ವಿವಿಧ ದವಸ ಭಂಡಾರದ ಪ್ರತಿನಿಧಿಗಳು ಮಾತನಾಡಿ, ದವಸ ಭಂಡಾರಗತಳೇ ಸಹಕಾರ ಪರಿಕಲ್ಪನೆಗೆ ಮೂಲವಾಗಿದೆ. ಹಿರಿಯರ ಉದ್ದೇಶಗಳಿಗೆ ಗೌರವ ನೀಡಿ ಸಂಘವನ್ನು ಉಳಿಸಿ ಬೆಳೆಸಲು ಅಗತ್ಯವಾದ ಪ್ರಗತಿ, ಕುಂದುಕೊರತೆ ಅಗತ್ಯತೆ ಕುರಿತು ಸಭೆಯ ಗಮನಕ್ಕೆ ತಂದರು.


ಕೊಳಕೇರಿ ದವಸ ಭಂಡಾರದ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ಹಿರಿಯರು ಉದಾರವಾಗಿ ನೀಡಿದ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಕಾರ್ಯದರ್ಶಿ ಮತ್ತು ಸ್ಟೋರ್ ಕೀಪರ್ ನಮ್ಮ ಆಧಾರ ಸ್ತಂಭಗಳಂತೆ ಕೆಲಸ ಮಾಡಿದ ಕಾರಣ ಉತ್ತಮ ಲಾಭಗಳಿಸುತ್ತಿದ್ದು ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರ ಪೂರೈಕೆ ಮತ್ತು ಸಾಲ ನೀಡುತ್ತಿರುವ ಕುರಿತು ತಿಳಿಸಿದರು.


ಹಾಲುಗುಂದ ಸಹಕಾರ ದವಸ ಭಂಡಾರದ ಅಧ್ಯಕ್ಷ ಪಿ.ಸಿ.ನಾಣಯ್ಯ ಮಾತನಾಡಿ, ಸ್ವಂತ ಕಟ್ಟಡವನ್ನು ಸಣ್ಣಪುಟ್ಟ ಕಾರ್ಯಗಳಿಗೆ ಬಾಡಿಗೆಗೆ ನೀಡಿ ಬಹುದಿನದಿಂದ ನವೀಕರಣಕ್ಕಾಗಿ ಆದಾಯದ ಕೊರತೆಯಿದೆ. ದುರ್ಬಲ ಸಹಕಾರ ಸಂಘಗಳಾದ ದವಸ ಭಂಡಾರಗಳಿಗೂ ಕೇಂದ್ರ ಬ್ಯಾಂಕ್‌ನಿಂದ ಪ್ಯಾಕ್ಸ್‌ಗಳಿಗೆ ವಿತರಿಸಿದ ರೀತಿ ಸಹಾಯಧನ ಮಾತ್ರವಲ್ಲದೆ ಲ್ಯಾಪ್‌ಟಾಪ್, ಗಣಕಯಂತ್ರ ಪರಿಕರಗಳನ್ನು ನೀಡಬೇಕು ಎಂದು ಮನವಿ ಮಾಡಿದರು.


ಪಶುಪಾಲನೆ, ಉಪಕಸುಬುಗಳು, ಸರ್ಕಾರದ ಯೋಜನೆಗಳ ಕುರಿತು ಡಾ.ಕೆ.ಎ.ಪ್ರಸನ್ನ, ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲೆ ಎಂ.ಎಂ.ಶ್ಯಾಮಲಾ, ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕಪರಿಶೋಧಕ ಹಂಸರವರು ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕ ಬಿ.ಎ.ರಮೇಶ್ ಚಂಗಪ್ಪ, ಕನ್ನಂಡ ಸಂಪತ್, ಪಿ.ಬಿ.ಯತೀಶ್, ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೇಮಲತಾ, ಕಗ್ಗೋಡ್ಲು ಪ್ಯಾಕ್ಸ್‌ನ ಕಾರ್ಯದರ್ಶಿ ಇಂದ್ರಕುಮಾರ್, ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.