ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ದೇಶದಲ್ಲಿಯೇ ಪ್ರಪ್ರಥಮ ಅಂಗವೈಕಲ್ಯವುಳ್ಳವರಿಗಾಗಿಯೇ ಮೀಸಲಿರುವ “ವೀಲ್‌ಚೇರ್ ಟೆನಿಸ್ ಸೆಂಟರ್ ಆಫ್ ಎಕ್ಸಲೆನ್ಸ್” ತರಬೇತಿ ಕೇಂದ್ರ ಸ್ಥಾಪನೆಯಾಗಿದೆ.
ಅಂಗವಿಕಲರಿಗಾಗಿಯೇ ಸ್ಥಾಪಿಸಲಾಗಿರುವ ಡ್ಯೂಸ್ ಟೆನಿಸ್ ಸೆಂಟರ್ (ಡಿಟಿಸಿ) - ದೇಶದ ಮೊದಲ ವೀಲ್‌ಚೇರ್ ಟೆನಿಸ್ ತರಬೇತಿ ಕೇಂದ್ರ. ದೈಹಿಕ ಅಂಗವೈಕಲ್ಯವುಳ್ಳವರ ಹಕ್ಕುಗಳು ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಹೋರಾಡುವ ಸಂಸ್ಥೆ ಆಸ್ತಾ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್) ಹಣಕಾಸು ಒದಗಿಸಲಾದ ಕ್ರೀಡಾ ಕೇಂದ್ರ ದೇಶದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನು ದಾಖಲಿಸಿತು.
ರಾಷ್ಟ್ರೀಯ ಮಹಿಳಾ ಚಾಂಪಿಯನ್ ವೀಲ್ ಚೇರ್ ಟೆನಿಸ್ ಆಟಗಾರ್ತಿ ಕೆ.ಪಿ. ಶಿಲ್ಪಾ., ಏಷ್ಯನ್ ಗೇಮ್ಸ್ ಪದಕ ವಿಜೇತ ಪ್ರಹ್ಲಾದ್ ಶ್ರೀನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಿಟಿಸಿ ಅಧ್ಯಕ್ಷ ಸಿ.ಎ.ಸುನಿಲ್ ಜೈನ್ ಮಾತನಾಡಿ, ಡಿಟಿಸಿ ಒಂದು ತಂಡದ ಪ್ರಯಾಣ. ದೈಹಿಕ ಸಾಮರ್ಥ್ಯದ ಹೊರತಾಗಿಯೂ ಸಾಧಕರನ್ನು ಸೃಷ್ಟಿಸುವ ಧ್ಯೇಯ ಹೊಂದಿದೆ ಎಂದು ತಿಳಿಸಿದ್ದಾರೆ.
ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ವಿಶೇಷ ಕ್ರೀಡಾ ಕೇಂದ್ರವು ಕರ್ನಾಟಕದ ಹೆಗ್ಗಳಿಕೆ. ಇದು ಕ್ರೀಡೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಗೆ ಹೊಸ ರೂಪ ನೀಡಿದೆ. ಸರ್ಕಾರ, ನಾಗರಿಕ ಸಮಾಜ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಏನೆಲ್ಲಾ ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ೫ ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಜೆಡಿಎಸ್ ಯುವ ಮುಖಂಡ ಬಿ.ಎನ್.ಸಚಿನ್, ಗ್ರಾ.ಪಂ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಹಿರಿಯ ಮುಖಂಡರಾದ ಎಂ.ಎ.ಸ್ವಾಮಿ, ಎಚ್.ಟಿ.ನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.