ಜಿಲ್ಲೆ

ದೇಶದ ಕೀರ್ತಿ ಹೆಚ್ಚಿಸಲು ಸಂಕಲ್ಪ ತೊಡೋಣ

ಲಿಂಗಸುಗೂರು: ವಿಶ್ವದಲ್ಲಿಯೇ ಅತಿದೊಡ್ಡ ಸಂವಿಧಾನ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವೆಂದು ಭಾರತ ಗುರುತಿಸಿಕೊಂಡಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಪಟ್ಟಣದ ಬಸವಸಾಗರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಭಾನುವಾರ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಮರ್ಪಿಸಿದ ಸಂವಿಧಾನದಡಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಜಾತಿ, ಮತ, ಪಂಥ ಭೇದಗಳಿಲ್ಲದೆ ಭಾರತ ಮುನ್ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಲು ನಾವೆಲ್ಲ ಸಂಕಲ್ಪ ತೊಡಬೇಕಿದೆ. ದೇಶದ ರಕ್ಷಣೆಗಾಗಿ ನಾವೆಲ್ಲ ಮಾನವ ಸರಪಳಿಯ ಕೊಂಡಿಯಂತೆ ನಮ್ಮ ಕರ್ತವ್ಯ ಅರಿತು ಕಾರ್ಯ ನಿರ್ವಹಿಸೋಣ ಎಂದರು.

ಎಸಿ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸುತ್ತಿರುವುದು ನಮ್ಮೆಲ್ಲರ ಒಗ್ಗಟ್ಟಿನ ಸಂಕೇತವಾಗಿದೆ. ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಲಭಿಸಿದ ವೇಳೆ ಸ್ವಾತಂತ್ರ್ಯ ಬಹುದಿನ ಉಳಿಯದೆಂದು ಭಾವಿಸಿದ್ದರು. ಆದರೆ 78 ವರ್ಷಗಳ ನಂತರವೂ ಭಾರತದ ಪ್ರಜಾಪ್ರಭುತ್ವ ಬಲಿಷ್ಠವಾಗಿ ಬೆಳೆಯುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನವು ಪ್ರಪಂಚಕ್ಕೆ ಮಾದರಿಯಾಗಿದೆ. ಭಾರತೀಯರು ವಿವಿಧತೆಯಲ್ಲಿ ಏಕತೆ ಮೆರೆಯುತ್ತ, ನಾವೆಲ್ಲ ಒಗ್ಗೂಡಿ ಮುನ್ನಡೆಯುತ್ತಿರುವ ಸಂಕೇತವೇ ಮಾನವ ಸರಪಳಿ ನಿರ್ಮಾಣದ ಉದ್ದೇಶವಾಗಿದೆ ಎಂದು ಹೇಳಿದರು.