ಮೊಳಕಾಲ್ಮೂರು: ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವಪೀಳಿಗೆ ಮರೆಯುತ್ತಿದ್ದು, ಅದನ್ನು ನೆನಪಿಸುವ ಜತೆಗೆ ದೇಶದ ಪ್ರಬುದ್ಧತೆ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರೊೃೀತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹೋರಾಟಗಾರರು, ಮಹನೀಯರ ತತ್ವಾದರ್ಶಗಳನ್ನು ಯುವ ಜನತೆಗೆ ಮನದಟ್ಟು ಮಾಡಬೇಕಿದೆ ಎಂದರು.
ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಉತ್ತಮ ನಾಗರಿಕ ಸಮಾಜ ನಿರ್ಮಾಣಕ್ಕಾಗಿ ಮಾನವೀಯ ಸಂಸ್ಕಾರ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯತೆಯನ್ನ ಬೆಳೆಸಬೇಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ವಿ. ರೂಪ ದ್ವಜಾರೋಹಣ ನೆರವೇರಿಸಿ ಮಾತನಾಡಿ, ತ್ಯಾಗ, ಬಲಿದಾನದ ಮೂಲಕ ಸ್ವಾತಂತ್ರ್ಯವನ್ನು ಪಡೆದ ಅಪರೂಪದ ದಿನ ಇದಾಗಿದೆ. ಸ್ವಾರ್ಥ ಜೀವನವನ್ನ ಮರೆತು ಸರ್ವರೂ ಸಹಬಾಳ್ವೆಯಲ್ಲಿ ಕೂಡಿ ಬಾಳುವ ಮಾನವಂತ ಸಮಾಜದ ನಾಯಕತ್ವ ಗುಣಗಳನ್ನ ಬೆಳಸಿಕೊಳ್ಳಬೇಕು ಎಂದರು.
ಇದೇ ಮೊದಲ ಬಾರಿ ತೆರೆದ ವಾಹನದಲ್ಲಿ ದ್ವಜ ವಂದನೆಯ ಪರೇಡ್ ನಡೆಸಲಾಯಿತು. ಮುಖ್ಯ ರಸ್ತೆ ಉದ್ದಗಲಕ್ಕೂ ರಾರಾಜಿಸಿದ ಬಾವುಟ ಹಾಗೂ ವಿದ್ಯುತ್ ದೀಪಾಲಂಕಾರ ನೋಡುಗರ ಮನಸೂರೆಗೊಂಡಿತು. ವಿವಿಧ ಶಾಲಾ ಮಕ್ಕಳು ರಾಷ್ಟ್ರ ಪ್ರೇಮದ ಸಾಂಸ್ಕೃತಿಕ ಚಟುವಟಿಕೆಗಳನ್ನ ನಡೆಸಿಕೊಟ್ಟರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಈರಣ್ಣ, ಪ್ರಬಾರ ಇಒ ಎಚ್.ಗಣೇಶ್, ಬಿಇಒ ಕೆ.ತಿಪ್ಪೇಸ್ವಾಮಿ, ಸಿಪಿಐ ವಸಂತ ವಿ.ಅಸೋಡೆ, ಮುಖ್ಯಾಧಿಕಾರಿ ಈ. ಲೀಲಾವತಿ, ಪ್ರಾಚಾರ್ಯ ಡಿ.ಸೂರಯ್ಯ, ಗೋವಿಂದಪ್ಪ,ಕೊಂಡಾಪುರ ಪರಮೇಶಿ ಇತರರಿದ್ದರು.