ಜಿಲ್ಲೆ

ದೇಶದ ಪರಂಪರೆ ಉಳಿಸಿ ಬೆಳೆಸೋಣ

ಮಸ್ಕಿ: ದೇಶಕ್ಕಾಗಿ ಕುಟುಂಬದೊಂದಿಗೆ ಸರ್ವಸ್ವವನ್ನು ತ್ಯಾಗ ಮಾಡುವ ವೀರ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಹೇಳಿದರು.

ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಪುರಸಭೆ ಆವರಣದಲ್ಲಿ ಶಿಲಾಫಲಕ ಸಮರ್ಪಣೆ, ಪಂಚಪ್ರಾಣ ಪ್ರತಿಜ್ಞೆ, ಅಮೃತ ವಾಟಿಕಾ, ವಸುಧಾ ವಂದನೆ ಹಾಗೂ ನಿವೃತ್ತ ಸೈನಿಕರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ಕಳಿಸಲಾಗುವುದು. ಅಭಿಯಾನದಡಿ ಪಟ್ಟಣದಲ್ಲಿ 75 ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಅವರ ಆಶಯ ನುಡಿಗಳಾದ ದೇಶದ ಬಗ್ಗೆ ಬದ್ಧತೆ ಪ್ರರ್ದಶಿಸಬೇಕು. ಭಾರತದ ಅಭಿವೃದ್ಧಿ ಹಾಗೂ ನಿರ್ಮಾಣದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು. ಯಾವುದೇ ರೀತಿಯ ವಸಾಹತುಶಾಹಿ ಮನಸ್ಥಿತಿಯ ಕುರುಹನ್ನು ತೊಡೆದು ಹಾಕೋಣ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಉಳಿಸಿ ಬೆಳೆಸೋಣ ಎಂದು ಪಂಚಪ್ರಾಣ ಪ್ರತಿಜ್ಞೆಯನ್ನು ಮುಖ್ಯಾಧಿಕಾರಿ ಬೋಧಿಸಿದರು. ನಿವೃತ್ತ ಸೈನಿಕರಾದ ಎನ್.ಎಸ್. ಸಾಲಿಮಠ, ಶಂಕ್ರಪ್ಪರನ್ನು ಸನ್ಮಾನಿಸಲಾಯಿತು.