ದೇವದುರ್ಗ: ಹತ್ತಿ, ಸೂರ್ಯಕಾಂತಿ ಸೇರಿ ವಿವಿಧ ಬಿತ್ತನೆ ಬೀಜಗಳನ್ನು ಎಂಆರ್‌ಪಿ ದರದಲ್ಲೇ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂಗಡಿ ಪರವಾನಗಿ ರದ್ದು ಮಾಡಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಸಿದ್ದರೆಡ್ಡಿ ಎಚ್ಚರಿಸಿದರು.
ಪಟ್ಟಣ, ಗಬ್ಬೂರು ಸೇರಿ ವಿವಿಧೆಡೆ ಬಿತ್ತನೆ ಬೀಜ, ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಗುರುವಾರ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಹತ್ತಿ ಬಿತ್ತನೆ ಬೀಜದ ಬೇಡಿಕೆ ಹೆಚ್ಚಾಗಿದ್ದು, ಎಂಆರ್‌ಪಿ 853 ರೂಪಾಯಿಗೆ ಮಾರಾಟ ಮಾಡಬೇಕು. ಹಲವು ಕಡೆ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ನಕಲಿ ರಸಗೊಬ್ಬರ ತನಿಖೆ ಸಿಐಡಿಗೆ: ದಂಧೆಕೋರರಿಗೆ ಅಂತಾರಾಜ್ಯ ನಂಟು; ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಹಾವಳಿ
ಹತ್ತಿ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ನಕಲಿ ಬಿತ್ತನೆ ಬೀಜ ನೀಡಿ ರೈತರಿಗೆ ಮೋಸ ಮಾಡದಿರಿ. ರೈತರಿಗೆ ಯಾವುದೇ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡಿದರೆ ಕಡ್ಡಾಯವಾಗಿ ರಸೀದಿ ನೀಡಬೇಕು. ನಿಮ್ಮಲ್ಲಿಯೂ ಒಂದು ದಾಖಲೆ ಇಟ್ಟುಕೊಳ್ಳಬೇಕು. ನಕಲಿ ಕಂಪನಿಗಳ ಉತ್ಪನ್ನ ಮಾರಾಟದ ದೂರುಗಳು ಬಂದರೆ ಅಂಗಡಿಗೆ ಬೀಗ ಹಾಕಲಾಗುವುದು ಬಸವರಾಜ ಸಿದ್ದರೆಡ್ಡಿ ಹೇಳಿದರು.