ಬೆಂಗಳೂರು: ಶುಕ್ರವಾರದಿಂದ ಮೂರು ದಿನಗಳ ಕಾಲ ಅರಮನೆ ಮೈದಾನದ ಗೇಟ್ ನಂ.6 ರ ರಾಯಲ್ ಸೆನೆಟ್, ಗ್ರ್ಯಾಂಡ್ ಕ್ಯಾಸಲ್ ಆವರಣದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಸಾನಿಧ್ಯ ವಹಿಸಲಿದ್ದು, ಮಂತ್ರಾಲಯ, ಆದಿಚುಂಚನಗಿರಿ, ಪೇಜಾವರ, ಯದುಗಿರಿ ಮತ್ತು ಸುಬ್ರಮಣ್ಯ ಮಠದ ಶ್ರೀಗಳು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಹಾಲಿ ಮಂತ್ರಿಗಳು, ಶಾಸಕರು, ಸಂಸದರು ಸೇರಿ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅಖಿಲ ಹವ್ಯಕ ಮಹಾಸಭೆಗೆ 81 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ 2300 ಕಿ.ಮೀ ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದ ಶ್ರೀರಾಮ ಕ್ಷೇತ್ರದಿಂದ ತರಲಾದ ಜ್ಯೋತಿಯಿಂದ ದೀಪವನ್ನು ಬೆಳಗಲಾಗುತ್ತದೆ. ಹಾಗೂ ಪೂಜ್ಯರಿಗೆ ಮತ್ತು ಗಣ್ಯರಿಗೆ 1081 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, 1081 ಮಕ್ಕಳಿಂದ ಪುಷ್ಪವೃಷ್ಟಿ, 1081 ಪುರುಷರಿಂದ ವೇದೋಷ ನಡೆಯಲಿದೆ.
ದಿವ್ಯ ಭವ್ಯ ಹವ್ಯ ಲೋಕದ ಅನಾವರಣೆ ಎಂಬ ಹೆಸರಿನಲ್ಲಿ ನಡೆಯಲಿರುವ ಮೂರು ದಿನಗಳ ಸಮ್ಮೇಳನದಲ್ಲಿ ಹವ್ಯಕ ಪಾಕೋತ್ಸವ (ಆಹಾರ ಮೇಳ), ಆಲೆಮನೆ, ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ, ಪಾರಂಪರಿಕ ವಸ್ತುಗಳ ಪ್ರದರ್ಶನ, ವಿದ್ವಾಂಸರ ಗೋಷ್ಠಿ, ಸಾಧಕರಿಗೆ ಸನ್ಮಾನ, ನಾಟಕ, ಸಂಗೀತ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ. ಹವ್ಯಕ ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಮತ್ತಿತರ ಪ್ರಮುಖರು ಕೊನೇ ಕ್ಷಣದ ಸಿದ್ದತೆಗಳನ್ನು ಪರಿಶೀಲಿಸಿದರು.