ಮಂಜುನಾಥ ತಿಮ್ಮಯ್ಯ ಮೈಸೂರು
ಲೋಕಸಭಾ ಚುನಾವಣೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಎಲೆಕ್ಷನ್ ಅಕ್ರಮ ತಡೆಗಟ್ಟಲು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸುವ ಮೂಲಕ ಹದ್ದಿನ ಕಣ್ಣು ಇಡಲಾಗಿದೆ. ಮೂರು ಪಾಳಿಯಲ್ಲಿ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಕ್ಷಿಣ ಕರ್ನಾಟಕ ಭಾಗದ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಏ.26ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡುವ ಹಾಗೂ ವಿವಿಧ ವಸ್ತುಗಳನ್ನು ಹಂಚುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಚೆಕ್‌ಪೋಸ್ಟ್‌ಗಳನ್ನು ಅಲರ್ಟ್‌ಗೊಳಿಸಲಾಗಿದೆ. ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಪ್ರತಿಯೊಂದು ವಾಹನವನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ 9 ರಸ್ತೆಗಳಲ್ಲಿ 10 ಕಡೆ ತೆರೆದಿರುವ ಚೆಕ್‌ಪೋಸ್ಟ್ನಲ್ಲಿ 24 ಗಂಟೆಯೂ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದ ಗಡಿ ಭಾಗ ಬಾವಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ 28 ಚೆಕ್‌ಪೋಸ್ಟ್ಗಳು ಕೆಲಸ ನಿರ್ವಹಿಸುತ್ತಿವೆ. ನಿತ್ಯ ನೂರಾರು ವಾಹನಗಳನ್ನು ತಡೆದು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಪ್ರಮುಖವಾಗಿ ಮೈಸೂರು-ನಂಜನಗೂಡು, ಮೈಸೂರು-ಮಡಿಕೇರಿ ರಸ್ತೆಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಇದರಿಂದಾಗಿ ವಾಹನಗಳು ಸಾಲುಗಟ್ಟಿ ನಿಂತುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಉಳಿದಂತೆ ಮೈಸೂರಿಂದ ಬನ್ನೂರು, ಮಹದೇವಪುರ, ತಿ.ನರಸೀಪುರ, ಎಚ್.ಡಿ.ಕೋಟೆ, ಸರಗೂರು, ಕೆಆರ್‌ಎಸ್ ರಸ್ತೆಯಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳಲ್ಲೂ ಪ್ರತಿಯೊಂದು ವಾಹನದ ಮೇಲೂ ನಿಗಾ ವಹಿಸಲಾಗಿದೆ.
ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ವಿವಿಧ ವಸ್ತುಗಳು, ಮದ್ಯ, ಹಣ ಸಾಗಿಸುವ ಶಂಕೆ ಇದೆ. ಆದ್ದರಿಂದ ಪ್ರತಿಯೊಂದು ಗೂಡ್ಸ್ ವಾಹನದಲ್ಲಿ ಸಾಗಿಸುವ ಎಲ್ಲ ವಸ್ತುಗಳು, ಸಂಬಂಧಪಟ್ಟ ದಾಖಲೆಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಕಾರು, ಅನುಮಾನ ವ್ಯಕ್ತವಾಗುವ ಖಾಸಗಿ ವಾಹನಗಳನ್ನೂ ಶೋಧಿಸಲಾಗುತ್ತಿದೆ.
ಒಬ್ಬ ವ್ಯಕ್ತಿ 50 ಸಾವಿರ ರೂ.ಗಿಂತ ಹೆಚ್ಚಿನ ಹಣ ಸಾಗಿಸುವಂತಿಲ್ಲ. 10 ಸಾವಿರ ರೂ. ಮೌಲ್ಯಕ್ಕಿಂತ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಸಾಗಿಸುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಹಣ, ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತದೆ. ಒಂದೊಮ್ಮೆ ಹೆಚ್ಚು ಹಣ ತೆಗೆದುಕೊಂಡು ಹೋದರೆ ಅದಕ್ಕೆ ಸಕಾರಣ ನೀಡಿದರೆ ಪರಿಶೀಲಿಸಿ ಹಣವನ್ನು ವಾಪಸ್ ಕೊಡಲಾಗುತ್ತದೆ.
ಚೆಕ್ಪೋಸ್ಟ್ನಲ್ಲಿ ತಪಾಸಣೆ ಮಾಡುವ ಎಲ್ಲ ವಾಹನಗಳ ಸಂಖ್ಯೆಯನ್ನು ದಾಖಲಿಸಲಾಗುತ್ತಿದ್ದು, ವಾಹನದಲ್ಲಿ ತಪಾಸಣೆ ಮಾಡುವ ದೃಶ್ಯ ಸಿಸಿ ಕ್ಯಾಮರಾ ಮೂಲಕ ಆಯಾ ತಾಲೂಕು ಕೇಂದ್ರದಲ್ಲಿ ತೆರೆದಿರುವ ವಿಡಿಯೋ ವೀಕ್ಷಣೆ ತಂಡ ಕೊಠಡಿಯಲ್ಲಿ ಪರದೆ ಮೇಲೆ ಬಿತ್ತರವಾಗುತ್ತದೆ. ಆದ್ದರಿಂದ ತಪಾಸಣಾ ಕಾರ್ಯದಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಶೀಘ್ರದಲ್ಲೇ ಕೇಂದ್ರದ ಭದ್ರತಾ ಪಡೆಯ ಸಿಬ್ಬಂದಿಯೂ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿ, ಅಭ್ಯರ್ಥಿಗಳ ವೆಚ್ಚದ ಮೇಲೆ 8 ತಂಡಗಳು ಕಣ್ಣಿಟ್ಟಿವೆ. ಈ ಪೈಕಿ 241 ಸೆಕ್ಟರ್ ಅಧಿಕಾರಿ, 50 ಫ್ಲೈಯಿಂಗ್ ಸ್ಕ್ವ್ವಾಡ್, 42 ಸ್ಥಳ ಕಣ್ಗಾವಲು ತಂಡ, 23 ವಿಡಿಯೋ ಚಿತ್ರೀಕರಣ ತಂಡ, 12 ವಿಡಿಯೋ ವೀಕ್ಷಣೆಯ ತಂಡ, 11 ಲೆಕ್ಕ ಪರಿಶೋಧನಾ ತಂಡ, 15 ಸಹಾಯಕ ವೆಚ್ಚ ವಿಚಕ್ಷಣಾ ತಂಡ ಕಾರ್ಯನಿರ್ವಹಿಸಲಿವೆ.
ಆನ್‌ಲೈನ್, ಡಿಜಿಟಲ್ ನಗದೀಕರಣದ ಮೇಲೂ ನಿಗಾ ಇರಿಸಲಾಗಿದೆ. ಸಾಮಾನ್ಯವಲ್ಲದ, ಅನುಮಾನಕ್ಕೆ ಅವಕಾಶ ನೀಡುವ ಬ್ಯಾಂಕ್ ಮೂಲಕ ನಡೆಯುವ ಹಣಕಾಸಿನ ವಹಿವಾಟುಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರ ವ್ಯಾಪ್ತಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ನಗರ ವ್ಯಾಪ್ತಿಗೆ ನರಸಿಂಹರಾಜ, ಕೃಷ್ಣರಾಜ, ಚಾಮರಾಜ ವಿಧಾನಸಭೆ ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರದ 167 ಮತಗಟ್ಟೆಗಳು ಹಾಗೂ ವರುಣ ಕ್ಷೇತ್ರದ 8 ಮತಗಟ್ಟೆಗಳು ನಗರ ಪೊಲೀಸ್ ವ್ಯಾಪ್ತಿಯಲ್ಲಿವೆ. ಚೆಕ್‌ಪೋಸ್ಟ್‌ಗಳಲ್ಲಿ ಎಂದಿನಂತೆ ಕಟ್ಟುನಿಟ್ಟಿನ ತಪಾಸಣೆ ಮುಂದುವರಿದಿದೆ.
ತಮಿಳುನಾಡು ಸೇರಿದಂತೆ ವಿವಿಧೆಡೆ ಮೊದಲ ಹಂತದ ಚುನಾವಣೆ ಮುಗಿದ ನಂತರ ಮೈಸೂರು ಭಾಗಕ್ಕೆ ಕೇಂದ್ರದ ಭದ್ರತಾ ಪಡೆಯ ಸಿಬ್ಬಂದಿ ಆಗಮಿಸಲಿದ್ದು, ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಶಸ್ತ್ರಸಜ್ಜಿತ ಭದ್ರತಾ ಕಾರ್ಯನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದ್ದಾರೆ
‘ಜಿಲ್ಲೆ 3 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ 1,947 ಬೂತ್‌ಗಳು ಒಳಪಡಲಿವೆ. ಈ ಪೈಕಿ 305 ಸೂಕ್ಷ್ಮ ಬೂತ್‌ಗಳಿದ್ದು, ಉಳಿದವು ಸಾಮಾನ್ಯ ಬೂತ್‌ಗಳಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ 731 ರೌಡಿಶೀಟರ್‌ಗಳಿದ್ದು, 583 ಜನರ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ. ಮೈಸೂರು ಜಿಲ್ಲಾದ್ಯಂತ ರೌಡಿಶೀಟರ್‌ಗಳ ಮೇಲೆ ನಿಗಾ ಇಡಲಾಗಿದೆ.
ಚುನಾವಣೆ ಅಕ್ರಮ ಕುರಿತು ಸಿ-ವಿಜಿಲ್ ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರು ಮಾಹಿತಿ ನೀಡಬಹುದು.
ಹಣ ಹಂಚಿಕೆ, ಕಾಣಿಕೆ ನೀಡಿಕೆ, ಮದ್ಯ ಸರಬರಾಜು, ಮತಗಟ್ಟೆಗೆ ಮತದಾರರನ್ನು ಕರೆತರುವಿಕೆ, ನಿಷೇಧಿತ ಪ್ರದೇಶದಲ್ಲಿ ಮತಯಾಚನೆ ಹೀಗೆ ಅಕ್ರಮ ತಡೆಗೆ ಹಲವು ಮಾಹಿತಿಯನ್ನು ಫೋಟೋ ಹಾಗೂ ವಿಡಿಯೋ ಮೂಲಕ ನೀಡಬಹುದು.
ದೂರಿನ ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ ಸ್ವಯಂಚಾಲಿತ ಸ್ಥಳ ಮ್ಯಾಪಿಂಗ್ ಮೂಲಕ ದೂರು ನಿರ್ವಹಣೆ ನಡೆಯುತ್ತದೆ. ಇಲ್ಲಿ ದೂರುದಾರರ ಕುರಿತು ಗೌಪ್ಯತೆ ಕಾಪಾಡಲಾಗುತ್ತದೆ.