ಜಿಲ್ಲೆ

ಇನ್ನಾ ದುರಂತಕ್ಕೆ ಕ್ಷಣಗಣನೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಖಾಸಗಿ ಜಾಗದಲ್ಲಿ ಕಳೆದ ತಿಂಗಳಿಂದ ಗುಡ್ಡ ಅಗೆದು ಜಾಗ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದ್ದು, ಇದೀಗ ಸ್ಥಳೀಯ ನಿವಾಸಿಗಳಿಗೆ ಆತಂಕ ಸೃಷ್ಟಿಸಿದೆ. ಯಾವುದೇ ಸಂದರ್ಭ ಗುಡ್ಡ ಕುಸಿದು ದೊಡ್ಡ ದುರಂತ ನಡೆಯುವ ಸಾಧ್ಯತೆಗಳಿವೆ ಎಂದು ಇನ್ನಾ ಗ್ರಾಮದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾ ಗ್ರಾಪಂ ವ್ಯಾಪ್ತಿಯ ಮಠದ ಕೆರೆ ಕಡೆಕುಂಜ ಭಾಗದಲ್ಲಿ ಖಾಸಗಿ ಸ್ಥಳದ ಮಾಲೀಕರು ಗುಡ್ಡ ಅಗೆದು ಜಾಗ ಸಮತಟ್ಟು ಮಾಡಲು ಜೆಸಿಬಿ ಯಂತ್ರ ಬಳಸಿದ್ದು, ಈಗಾಗಲೇ ಸುಮಾರು ಎಕರೆ ಪ್ರದೇಶ ಅಗೆದ ಪರಿಣಾಮ ತಳಭಾಗದಲ್ಲಿರುವ 20ಕ್ಕೂ ಅಧಿಕ ಮನೆಯ ಮಂದಿ ಆತಂಕ ಎದುರಿಸುವಂತಾಗಿದೆ. 250-300 ಅಡಿ ಎತ್ತರದ ಗುಡ್ಡ ಅಗೆಯುವುದರಿಂದ ಸಮಸ್ಯೆ ತಪ್ಪಿದ್ದಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಯನಾಡು ದುರಂತ ಆಗದಿರಲಿ

ಈಗಾಗಲೇ ಸುಮಾರು ಎಕರೆ ಭೂಪ್ರದೇಶ ಅಗೆದು ಹಾಕಿದ್ದು, ಗುಡ್ಡ ಸಂಪೂರ್ಣ ಬಲ ಕಳೆದುಕೊಂಡತ್ತಿದೆ. ಗುಡ್ಡದ ತಳಭಾಗದಲ್ಲಿ ಮನೆಗಳಿದ್ದು, ಹಾನಿಯಾಗುವ ಸಾಧ್ಯತೆಯಿದೆ ಎನ್ನುವುದನ್ನೂ ಮನಗಂಡರೂ ರಾಜರೋಷವಾಗಿ ಗುಡ್ಡ ಅಗೆಯಲಾಗುತ್ತಿದೆ. ಹೀಗಾಗಿ ಮುಂದಿನ ಮಳೆಗಾಲ ಸಂದರ್ಭದಲ್ಲಿ ಧಾರಕಾರವಾಗಿ ಮಳೆ ಸುರಿದರೆ ಗುಡ್ಡ ಕುಸಿತಗೊಂಡು ಭಾರಿ ಅನಾಹುತ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಮತ್ತೊಂದು ವಯನಾಡು ದುರಂತ ನಮ್ಮ ಇನ್ನಾ ಗ್ರಾಮದಲ್ಲಿ ನಡೆಯದಿರಲಿ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಧೂಳಿನ ಸಮಸ್ಯೆ

ಗುಡ್ಡ ಅಗೆಯುವ ಸ್ಥಳ ಸಮೀಪದಲ್ಲೇ ಲೋಕೋಪಯೋಗಿ ಇಲಾಖೆ ರಸ್ತೆಯಿದ್ದು, ಈ ರಸ್ತೆ ಇಡೀ ಗ್ರಾಮದ ಜನ ಅವಲಂಬಿಸಿದ್ದಾರೆ. ನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸ ಕಾರ್ಯಕ್ಕೆ ತೆರಳುವ ಮಂದಿ, ಸಾರ್ವಜನಿಕರು ಧೂಳು ತುಂಬಿದ ರಸ್ತೆಯಲ್ಲೇ ಓಡಾಡುವುದೇ ಅನಿವಾರ್ಯ. ರಸ್ತೆಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಅತ್ತಿತ್ತ ಓಡಾಡುವುದರಿಂದ ಪರಿಸರವಿಡೀ ಧೂಳಿನಿಂದ ಕೂಡಿದೆ. ಅಲ್ಲದೆ ಸ್ಥಳೀಯ ಮನೆಗಳು ಕೂಡ ಧೂಳಿನಿಂದ ಆವೃತಗೊಂಡಿದೆ.

ಗ್ರಾಮಸ್ಥರಿಂದ ಮನವಿ

ಕಳೆದ ಹಲವು ತಿಂಗಳಿಂದ ಜೆಸಿಬಿ ಯಂತ್ರ ಬಳಸಿ ರಾಜರೋಷವಾಗಿ ಗುಡ್ಡ ಅಗೆದ ಪರಿಣಾಮ ಸ್ಥಳೀಯ ಮನೆಯ ಮಂದಿ ಸಮಸ್ಯೆ ಎದುರಿಸುವಂತಾಗಿದೆ. ಪರಿಸರದಲ್ಲಿ ಧೂಳಿನ ಸಮಸ್ಯೆ ಒಂದೆಡೆಯಾದರೇ ಬೃಹತ್ ಗುಡ್ಡ ಬಲ ಕಳೆದುಕೊಂಡು ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆಗಳಿವೆ. ಪ್ರಕೃತಿ ನಾಶದ ಜತೆಗೆ ಪ್ರಾಕೃತಿಕ ವಿಕೋಪಕ್ಕೂ ಇದು ಕಾರಣವಾಗಲಿದೆ ಎಂದು ವಿರೋಧಿಸಿ ಸ್ಥಳೀಯ ನಿವಾಸಿಗಳು ಸ್ಥಳೀಯ ಇನ್ನಾ ಗ್ರಾಪಂಗೆ ಹಾಗೂ ಕಾರ್ಕಳ ತಹಸೀಲ್ದಾರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಕಳೆದ ಹಲವು ಸಮಯದಿಂದ ಗುಡ್ಡ ಅಗೆಯುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಇಡೀ ಗುಡ್ಡವೇ ಕುಸಿದು ಬೀಳುವ ಸಾಧ್ಯತೆಗಳಿದ್ದು, ಭಾರೀ ಆತಂಕದಲ್ಲಿ ಇಲ್ಲಿನ ನಿವಾಸಿಗಳು ದಿನ ಕಳೆಯುವಂತಾಗಿದೆ. ಈ ಭಾಗದಲ್ಲಿ ಸುಮಾರು 20ಕ್ಕೂ ಅಧಿಕ ಮನೆಗಳಿದ್ದು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. -ಕುಶಾ ಆರ್. ಮೂಲ್ಯ ಮಾಜಿ ಗ್ರಾಪಂ ಅಧ್ಯಕ್ಷ https://www.vijayavani.net/the-installation-of-the-idol-at-the-kaup-temple-is-celebrated https://www.vijayavani.net/gods-grace-in-business-life