ನರೇಗಲ್ಲ: ಈ ವರ್ಷ ಕಡಲೆ, ಹತ್ತಿ, ಕುಸುಬೆ ಬೆಳೆಗಳು ಸಮೃದ್ಧವಾಗಿ ಬೆಳೆಯಲಿವೆ...
ಇದು ಯಾರೋ ಸ್ವಾಮೀಜಿಯವರು ನುಡಿದ ಭವಿಷ್ಯವಲ್ಲ. ಬದಲಾಗಿ ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯುಗಾದಿ ಹಬ್ಬದ ದಿನ ಸೂರ್ಯೋದಯಕ್ಕೂ ಮುಂಚೆ ಹೆಚ್ಚಾಗಿ ಕಾಣಿಸಿಕೊಂಡ ಸಸಿಗಳ ಆಧಾರದಲ್ಲಿ ರೈತರು ಕಂಡುಕೊಂಡ ವರ್ಷ ಭವಿಷ್ಯವಾಗಿದೆ.
ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಸ್ಥಾನದ ಸುತ್ತಲೂ ಯುಗಾದಿ ಪಾಢ್ಯದ ದಿನ ಪ್ರಾತಃಕಾಲ ಭವಿಷ್ಯ ಹೇಳುವ ಸಸಿಗಳು ಗೋಚರಿಸುತ್ತವೆ. ಈ ಸಸಿಗಳ ಸಿಗುವ ಆಧಾರದಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಇದು ದೇವರ ಆಶೀರ್ವಾದ ಎನ್ನುವ ನಂಬಿಕೆ ರೈತರದ್ದಾಗಿದೆ. ಭಾನುವಾರ ಬೆಳಗ್ಗೆ 4 ರಿಂದ 7ರ ವರೆಗೆ ದೇವಸ್ಥಾನದ ಆವರಣದ ಸುಮಾರು 17 ಎಕರೆ ಜಾಗದಲ್ಲಿ ಬೆಳೆದ ಗಿಡ ಗಂಟಿಗಳ ನಡುವೆ ವಿವಿಧ ಬಗೆಯ ಸಸಿಗಳು ಕಾಣಿಸುತ್ತವೆ. ಯಾವ ಬೆಳೆಯ ಸಸಿಗಳು ಹೆಚ್ಚಾಗಿ ಕಾಣಿಸುತ್ತವೆಯೋ ಆ ಬೆಳೆಗಳೇ ಈ ವರ್ಷ ಹೆಚ್ಚು ಬೆಳೆಯುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ವಿವಿಧ ಊರುಗಳಿಂದ ಯುಗಾದಿ ಹಬ್ಬದ ದಿನದಂದು ರೈತರು ರಾತ್ರಿ ಅಥವಾ ಬೆಳಗಿನ ಜಾವ ಕಂಟಿ ಬಸವೇಶ್ವರ ಸನ್ನಿಧಿಗೆ ಬಂದು ಶ್ರೀ ಬಸವೇಶ್ವರರ ದರ್ಶನ ಪಡೆದು ಟಾರ್ಚ್, ಅಥವಾ ಮೊಬೈಲ್ ಟಾರ್ಚ್ ಹಾಕಿಕೊಂಡು ಸಸಿಗಳನ್ನು ಹುಡುಕುತ್ತಾರೆ. ಈ ವರ್ಷ ಕಡಲೆ, ಹತ್ತಿ, ಕುಸುಬೆ ಸಸಿಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ರೈತರ ನಂಬಿಕೆಯಂತೆ ತಮ್ಮ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುತ್ತಾರೆ. ಸಿಕ್ಕ ಸಸಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾರೆ.
ಅಬ್ಬಿಗೇರಿಯ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ಯುಗಾದಿ ಪಾಡ್ಯದಂದು ಮಾತ್ರ ಕಾಣಸಿಗುವ ಸಸಿಗಳನ್ನು ಹುಡುಕಲು ನಸುಕಿನ ಜಾವ ಹೋಗುತ್ತೇವೆ. ಬಹಳಷ್ಟು ಜನರಿಗೆ ಸಸಿಗಳು ಸಿಗದೇ ಬರಿಗೈಯಲ್ಲಿ ಹೋದರೆ, ಇನ್ನೊ ಕೆಲವರಿಗೆ ಸಾಕಷ್ಟು ಪ್ರಮಾಣದಲ್ಲಿ ಸಸಿಗಳು ಸಿಗುತ್ತವೆ. ಇದೊಂದು ಅಪರೂಪದಲ್ಲಿಯೇ ಅಪರೂಪದ ಪವಾಡ. ಈ ಸ್ಥಳ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಇರುವುದರಿಂದ ಇದು ಸಾಧ್ಯ. ಇದೊಂದು ಜಾಗೃತ ಕ್ಷೇತ್ರವಾಗಿರುವುದಕ್ಕೆ ಇಲ್ಲಿ ನಡೆಯುವ ಪವಾಡವೇ ಸಾಕ್ಷಿ. ಬಸವರಾಜ ಪಲ್ಲೇದ, ಉಪನ್ಯಾಸಕರು ಅಬ್ಬಿಗೇರಿ