ಜಿಲ್ಲೆ

ಜಿಲ್ಲೆಯ ಹತ್ತಿ ಉದ್ಯಮ ಕುಸಿತ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ನಗರದ 56ಕ್ಕೂ ಅಧಿಕ ಕಾಟನ್ ಮಿಲ್‌ಗಳು ಬಂದ್‌ಯಾಗಿವೆ.

ಕಳೆದ ಕೆಲ ವರ್ಷದ ಹಿಂದೆ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುತ್ತಿದ್ದ ರೈತರು ಸದ್ಯ ಬೆರಣಿಕೆಯಷ್ಟೇ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದಾರೆ. ಕಲಬೆರೆಕೆ ಬಿತ್ತನೆ ಬೀಜಗಳು, ಅತಿಯಾದ ಕೀಟನಾಶಕ, ದುಬಾರಿ ಗೊಬ್ಬರ ಬಳಕೆ ಹೂಡಿದ ಬಂಡವಾಳ ವಾಪಸ್ ಬಾರದೇ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ 62 ಕಾಟನ್ ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಗಾರರು ಕ್ಷೀಣಿಸುತ್ತಿದ್ದಂತೆ ಮಿಲ್‌ಗಳಿಗೆ ಕಾಟನ್ ಪೂರೈಕೆ ಕೊರತೆಯಿಂದ 56 ಮಿಲ್‌ಗಳು ಸಂಪೂರ್ಣವಾಗಿ ಮುಚ್ಚಲಾಗಿದೆ. ಸದ್ಯ ಐದಾರು ಕಾಟನ್ ಮಿಲ್‌ಗಳು ಮಾತ್ರ ನಡೆಯುತ್ತಿವೆ. ಇನ್ನೂ ಕೆಲ ವರ್ಷ ಹೀಗೆ ನಡೆದರೆ ಸಂಪೂರ್ಣವಾಗಿ ಹತ್ತಿ ಉದ್ಯಮ ಬಂದ್‌ಯಾಗಲಿದೆ. ಹತ್ತಿಯನ್ನೇ ನಂಬಿದ್ದ 3000 ಸಾವಿರ ಕೂಲಿ ಕಾರ್ಮಿಕರು ಹಾಗೂ ಉದ್ಯಮದಾರು ಬೀದಿಗೆ ಬರಲಿದ್ದಾರೆ.

ಪೈಪೋಟಿ : ನೆರೆಯ ರಾಯಚೂರು ಜಿಲ್ಲೆಯಲ್ಲಿ ಹತ್ತಿಯ ಸೀಸನ್‌ನಲ್ಲಿ ಐದು ತಿಂಗಳಲ್ಲಿ 10 ಲಕ್ಷ ಬೇಲ್ (ಒಂದು ಬೇಲ್ 175 ಕೆಜಿಗೆ ಸಮ )ಹತ್ತಿ ಸಂಗ್ರಹವಾಗಿದೆ. (ಒಂದು ಬೇಲ್ ಸಿದ್ಧಗೊಳ್ಳಲು ಐದು ಕ್ವಿಂಟಾಲ್) ಬಳ್ಳಾರಿಯಲ್ಲಿ ಕೇವಲ 1.30 ಲಕ್ಷ ಬೇಲ್ ಹತ್ತಿ ಸಂಗ್ರಹವಾಗಿದೆ. ಕಳೆದ ಎರಡ್ಮೂರು ವರ್ಷದ ಹಿಂದೆ ರಾಯಚೂರು ಜಿಲ್ಲೆಗೆ ಪೈಪೋಟಿಯಾಗಿದ್ದ ಬಳ್ಳಾರಿ ಹತ್ತಿ ಉದ್ಯಮ ಪೂರೈಕೆ ಕೊರತೆಯಿಂದ ಸಂಪೂರ್ಣವಾಗಿ ನೆಲಕ್ಕೆ ಹಚ್ಚಿದೆ. ಜಿಲ್ಲೆಯ ಐದಾರು ಕಾಟನ್ ಮಿಲ್‌ಗಳಿಗೆ ಆಂಧ್ರದ ಕಣೇಕಲ್, ರಾಯದುರ್ಗ, ರಾಂಪುರ, ಮೊಳಕಾಲ್ಮೂರು ತಾಲೂಕಿನಿಂದ ಮಾತ್ರ ಹತ್ತಿ ಪೂರೈಕೆಯಾಗುತ್ತಿದೆ.

ಜೂನ್‌ನಲ್ಲಿ ಬಿತ್ತನೆ ಪೂರ್ಣಗೊಳಿಸಿ : ಕಾಯಿಗೆ ಕೀಟಗಳ ಬಾಧೆಯಿಂದ ಇರುಕು ಒಡೆದು ಹತ್ತಿ ಇಳುವರಿ ಕಡಿಮೆಯಾಗುತ್ತಿದೆ ಎಂಬ ಭೀತಿಯಿಂದ ರೈತರು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಮೇ ಕೊನೆಯ ಹಾಗೂ ಜೂನ್‌ನ ಮೊದಲ ವಾರದಲ್ಲಿಯೇ ಹತ್ತಿ ಬಿತ್ತನೆ ಪೂರ್ಣಗೊಂಡಿರಬೇಕು. ಇದರಿಂದ, ಚಳಿಗಾಲ ಬರುವ ಮುನ್ನವೇ ಬಿಸಿಲಿನ ತಾಪಕ್ಕೆ ಹತ್ತಿ ಬೆಳೆಯು ಉತ್ತಮ ಇಳುವರಿ ಬರಲಿದೆ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಆದರೆ, ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳು ಹರಿಯುತ್ತಿವೆ. ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಕಾಲುವೆಯಿಂದ ನೀರು ಹರಿಸುವುದರಿಂದ ಆಗ ಹತ್ತಿ ಬಿತ್ತನೆಗೆ ಮುಂದಾಗುತ್ತಾರೆ ಉತ್ತಮ ಫಸಲು ಬರುವ ವೇಳೆ ಚಳಿಗಾಲ ಬರುವುದರಿಂದ ಕಾಯಿಗಳಲ್ಲಿ ಕೀಟಗಳ ಬಾಧೆ ಕಾಣಿಸಿಕೊಂಡು ಇಳುವರಿ ಕುಸಿಯಲಿದೆ. ಆದ್ದರಿಂದ, ಜಿಲ್ಲೆಯ ಯಾವ ಯಾವ ಪ್ರದೇಶದಲ್ಲಿ ಹತ್ತಿ ಬೆಳೆಗಾರರನ್ನು ಗಮನಿಸಿಕೊಂಡು ಕೃಷಿ ವಿಜ್ಞಾನಿಗಳ ಮೂಲಕ ಸಭೆಗಳನ್ನು ಆಯೋಜಿಸಿ ರೈತರಿಗೆ ಮಾಹಿತಿ ಒದಗಿಸಬೇಕಾದ ಕೃಷಿ ಅಧಿಕಾರಿಗಳು ಮಾತ್ರ ನಮಗೆ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಮೈಮರೆತಿದ್ದಾರೆ. ಹತ್ತಿಯನ್ನೆ ಬೆಳೆಯುತ್ತಿದ್ದ ಸಾವಿರಾರು ಕಳೆದ ಎರಡು ವರ್ಷದಿಂದ ಎಕರೆಗೆ ಲಕ್ಷಾಂತರ ರೂ. ವ್ಯಯಿಸಿ ಮೆಣಸಿನಕಾಯಿ ಬೆಳೆದು ಟ್ರಿಪ್ಸ್ ಕಾಟ ಹಾಗೂ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದಾರೆ. ಇನ್ನಾದರೂ ವಿವಿಧ ಬೆಳೆಗಳನ್ನು ಬೆಳೆಯಲು ರೈತರಿಗೆ ಅಧಿಕಾರಿಗಳು ಕಾರ್ಯಕ್ರಮಗಳು ಆಯೋಜಿಸಿ ಮನವರಿಕೆ ಮಾಡಬೇಕಿದೆ.

ಕೋಟ್... ಕಾಟನ್ ಮಿಲ್‌ಗಳಿಗೆ ಹತ್ತಿ ಪೂರೈಕೆ ಕೊರತೆಯಿಂದ ನಿರ್ವಹಿಸಲು ಕಷ್ಟವಾಗಿದೆ. ಬೇರೆ ಜಿಲ್ಲೆಗಳಿಂದ ಹತ್ತಿ ತರಿಸಿಕೊಳ್ಳಲು ಸಾರಿಗೆ ವೆಚ್ಚ ಹೊರೆಯಾಗಲಿದೆ. ಜಿಲ್ಲೆಯಲ್ಲಿ ಹತ್ತಿ ಬೆಳೆದರೆ ಉದ್ಯಮಗಳಿಗೆ ಅನುಕೂಲವಾಗಲಿದೆ. ಸರ್ಕಾರ ಹತ್ತಿ ಕುಸಿತದ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು.

- ದಂಡಿನ ತಿಪ್ಪೇಸ್ವಾಮಿ, ಅಧ್ಯಕ್ಷ, ಕಾಟನ್ ಮಿಲ್ ಅಸೋಸಿಯೇಷನ್, ಬಳ್ಳಾರಿ.