ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 23 ಕೋಟ್ಪಾ ದಾಳಿಗಳನ್ನು ಕೈಗೊಂಡು 420 ಪ್ರಕರಣಗಳನ್ನು ದಾಖಲಿಸಿದ್ದು 35,550 ರೂ ದಂಡವನ್ನು (2024 ರ ಅಕ್ಟೋಬರ್ನಿಂದ ಇಲ್ಲಿಯವರೆಗೆ) ಸಂಗ್ರಹಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೈಗೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮದ(ಕೋಟ್ಪಾ -2003) ಜಿಲ್ಲಾ ಮಟ್ಟದ ತೆಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಹೆಚ್ಚಿನ ಕಾರ್ಯಾಚರಣೆ ಮತ್ತು ಜಾಗೃತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಾಧನೆ ತೋರಲು ಸೂಚಿಸಿದರು. ಇತ್ತೀಚಿಗಿನ ದಿನಗಳಲ್ಲಿ ಯುವಕ- ಯುವತಿಯರು ನಾನಾ ಕಾರಣಗಳ ಹಿನ್ನೆಲೆಯಲ್ಲಿ ತಂಬಾಕು ಮತ್ತು ಮಾದಕ ವಸ್ತುಗಳ ವ್ಯಸನಿಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದರು.
ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವಂತಾಗಬೇಕು. ಇದಕ್ಕೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ, ವ್ಯಾಪಾರ ಮಳಿಗೆಗಳ ಹಾಗೂ ಅಂಗಡಿಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್ ಮಹೇಶ್ ಕುಮಾರ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಕೃಷ್ಣ ಪ್ರಸಾದ್ ಮತ್ತಿತರರು ಇದ್ದರು.
* ಸಾಧನೆಯ ಬಗ್ಗೆ ಚರ್ಚೆ
ಶಾಲಾ ಕಾಲೇಜುಗಳು, ಅಂಗನವಾಡಿಗಳ ಕೇಂದ್ರಗಳನ್ನು ತಂಬಾಕು ಮುಕ್ತ ಪ್ರದೇಶ ಎಂಬುದಾಗಿ ಘೋಷಣೆ, ನಿಯಮ ಪಾಲನೆಯ ಮೇಲೆ ನಿಗಾ, ಉಲ್ಲಂನೆಯ ವಿರುದ್ಧ ನಿರ್ದಾಣ್ಯ ಕ್ರಮ,
ಜನ ಸಂದಣಿ ಪ್ರದೇಶಗಳಲ್ಲಿ ಜಾಗೃತಿ ಬ್ಯಾನರ್, ಪೋಸ್ಟರ್ ಗಳನ್ನು ಅಳವಡಿಸುವುದರ ಬಗ್ಗೆ ಚರ್ಚಿಸಲಾಯಿತು. ಜಿಲ್ಲಾ ಕೇಂದ್ರದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಜಿಲ್ಲಾಸ್ಪತ್ರೆ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಸುರಕ್ಷತಾ ಸ್ಥಳಗಳಲ್ಲಿ ಎಲ್.ಇ.ಡಿ ಬೋರ್ಡ್ ಗಳನ್ನು ಅಳವಡಿಸಲು, ಜಾಗೃತಿ ಸಂದೇಶಗಳನ್ನು ಪ್ರಸಾರ ಮಾಡಲು ನಿರ್ಧರಿಸಲಾಯಿತು. ಆರೋಗ್ಯ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.