ಮಂಗಳೂರು ಜೆಪ್ಪು ಸಂತ ಜೋಸೆಫ್ ಚರ್ಚ್ ಸಮೀಪ ಇತ್ತೀಚೆಗೆ ಆರಂಭಗೊಂಡ ಕರಾವಳಿ ಹಂದಿ ಸಾಕಾಣಿಕೆ ರೈತ ಉತ್ಪಾದಕರ ಕಂಪನಿ ಕಚೇರಿ.
ತಿಂಗಳ ಹಿಂದೆ ಏರಿದ ಹಂದಿ ಮಾಂಸದ ಬೆಲೆ ಕೆಳಗೆ ಇಳಿಯಲೇ ಇಲ್ಲ. ಕೆಜಿಗೆ 250 ರೂ ಇದ್ದ ಮಾಂಸದ ಬೆಲೆ 350 ರೂ ತಲುಪಿದೆ. ಅಧಿಕ ಹಣ ತೆತ್ತಾದರೂ ದೊಡ್ಡ ಹಂದಿ ತರೋಣ ಎಂದರೆ ಸಾಕಾಣೆದಾರರಲ್ಲಿ ಲಭ್ಯವಿಲ್ಲ. ಮಾರಾಟ ಮಾಡಿ ಸ್ವಲ್ಪ ಒಳ್ಳೆಯ ಆದಾಯ ಮಾಡಿಕೊಳ್ಳೋಣ ಅಂದರೆ ಸಾಕಾಣಿಕೆದಾರರಲ್ಲಿ ಸಾಕಷ್ಟು ಹಂದಿಗಳೇ ಇಲ್ಲ.
- ಹಂದಿ ಸಾಕಾಣೆದಾರರ ಅಭ್ಯುದಯಕ್ಕಾಗಿಯೇ ಇತ್ತೀಚೆಗೆ ಸ್ಥಾಪನೆಯಾದ ಕರಾವಳಿ ಹಂದಿ ಸಾಕಾಣಿಕೆ ರೈತ ಉತ್ಪಾದಕರ ಕಂಪನಿಗೆ ಕೂಡ ಅಗತ್ಯ ಪ್ರಮಾಣದಲ್ಲಿ ಹಂದಿಗಳು ಪೂರೈಕೆಯಾಗುತ್ತಿಲ್ಲ. ಗ್ರಾಹಕರ ಬೇಡಿಕೆ ಪೂರೈಕೆಗೆ ಕಂಪನಿ ನಿರ್ವಾಹಕರು ಪರ್ಯಾಯ ಮೂಲ ಹುಡುಕಾಟದಲ್ಲಿದ್ದಾರೆ. ಕಂಪನಿಯಲ್ಲಿ 488 ಮಂದಿ ಸದಸ್ಯರಿದ್ದಾರೆ.
- ಮಂಗಳೂರು ತಾಲೂಕು ಪಡು ಪೆರಾರೆ ಗ್ರಾಮದ ಒಂದು ಖಾಸಗಿ ಫಾರ್ಮ್‌ನಲ್ಲಿ ಹಂದಿಜ್ವರ ಪತ್ತೆಯಾಗುವ ಮೊದಲೇ ಜಿಲ್ಲೆಯ ಕೆಲವೆಡೆ ಈ ರೋಗ ಬಾಧೆ ಇರುವುದು ಖಚಿತವಾಗಿದ್ದು, ಕೆಲವು ಸಾಕಾಣೆದಾರರು ವಿಷಯ ಗೌಪ್ಯವಾಗಿಟ್ಟು ವ್ಯಾಪಾರ ಮಾಡಿರುವ ಬಗ್ಗೆ ಮಾಹಿತಿ ಇದೆ.
- ಆಫ್ರಿಕನ್ ಹಂದಿ ಜ್ವರವು ಸಾಂಕ್ರಾಮಿಕ ವೈರಾಣುವಿನಿಂದ ಸುಲಭವಾಗಿ ಹರಡುವ ರೋಗವಾಗಿದೆ. ಈ ಕಾಯಿಲೆಯಿಂದ ಮರಣ ಪ್ರಮಾಣವು 100 ಶೇ. ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿಗಳ ಸಲಹೆಯಂತೆ ಹೆಚ್ಚಿನವರು ಸಾಕುವ ಹಂದಿಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದ್ದಾರೆ.
- ದೊಡ್ಡ ಹಂದಿಗಳ ಕೊರತೆ ತೀವ್ರ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಂದಿಯ ಸಣ್ಣಮರಿಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ. ಎರಡು ತಿಂಗಳು ಪ್ರಾಯದ ಒಂದು ಹಂದಿ ಮರಿ 6,000 ರೂ ದರದಲ್ಲಿ ಮಾರಾಟವಾಗುತ್ತಿದೆ. ಈ ಹಿಂದೆ ಈ ವಯಸ್ಸಿನ ಮರಿ 2,500 ರೂ.ವಿನಿಂದ 3,000 ರೂ ತನಕ ಮಾರಾಟವಾಗುತ್ತಿತ್ತು .
- ಹಂದಿ ಜ್ವರ ಹರಡುವ ಭೀತಿ ಹಾಗೂ ಸಣ್ಣ ಮರಿಗಳಿಗೆ ಒಳ್ಳೆಯ ದರ ಇರುವ ಕಾರಣ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಹೆಚ್ಚಿನ ಸಾಕಾಣಿಕೆದಾರರು ಹಂದಿ ಮರಿಗಳ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ಕೂಡ ಮಾಂಸಕ್ಕೆ ದೊಡ್ಡ ಹಂದಿಗಳು ಕೊರತೆಯಾಗಲು ಕಾರಣ ಎನ್ನುತ್ತಾರೆ ಐಸಿಸಿಓಎ ಸಂಯೋಜಕ ಸತೀಶ್.
- ಪ್ರಸ್ತುತ ಆಫ್ರಿಕನ್ ಹಂದಿ ಜ್ವರದ ಆತಂಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲ. ಅದರೂ ಸ್ವಲ್ಪ ಸಮಯ ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡುವ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಸಾಕಾಣಿಕೆದಾರರಿಗೆ ಸಲಹೆ ನೀಡಿದ್ದೇವೆ. ಸಾಮಾನ್ಯವಾಗಿ ಸಾಗಾಟ ಸಂದರ್ಭ ರೋಗ ಸುಲಭವಾಗಿ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ನಡುವೆ ಹಂದಿ ಸಾಗಾಟ ನಿರ್ಬಂಧಿಸಿದೆ ಎಂದು ಮಂಗಳೂರು ಪಶುರೋಗ ತಪಾಸಣಾ ಕೇಂದ್ರದ ಪ್ರಾದೇಶಿಕ ಸಂಶೋಧನಾ ಅಧಿಕಾರಿ ಡಾ.ವಸಂತ ಶೆಟ್ಟಿ ತಿಳಿಸಿದ್ದಾರೆ.