ವಿಜಯವಾಣಿ ಸುದ್ದಿಜಾಲ ಧಾರವಾಡ
ಒಂದು ಸಂಸ್ಥೆ ಸ್ಥಾಪಿಸಿ ನೂರು ವರ್ಷಗಳ ಕಾಲ ಉತ್ತಮವಾಗಿ ಮುನ್ನಡೆಸುವುದು ಸಾಮಾನ್ಯದ ಮಾತಲ್ಲ. ಅಂತಹದ್ದರಲ್ಲಿ ಕಾಸ್ಮಸ್ ಕ್ಲಬ್ ಅನ್ನು 100 ವರ್ಷಗಳ ಕಾಲ ನಡೆಸಿದ್ದಲ್ಲದೆ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ನೀಡಿದೆ. ಇದಕ್ಕೆ ಸಂಸ್ಥೆ ಆಡಳಿತ ಮಂಡಳಿ ಕಾರ್ಯವೈಖರಿಯೇ ಕಾರಣ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಇಲ್ಲಿನ ಜೆಎಸ್ಎಸ್ ಆವರಣದಲ್ಲಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಸ್ಮಸ್ ಕ್ಲಬ್ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷ್ ಕಾಲದಲ್ಲಿ ಸ್ಥಾಪನೆಯಾದ ಕಾಸ್ಮಸ್ ಕ್ಲಬ್ ಮನರಂಜನೆಗೆ ಮಾತ್ರ ಸೀಮಿತವಾಗದೆ ಕ್ರೀಡಾಪಟುಗಳನ್ನು ಸಿದ್ಧಪಡಿಸುವ, ಕ್ರೀಡಾಸ್ಫೂರ್ತಿ ತುಂಬುವ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸದಾ ಪ್ರೇರಣೆ ನೀಡುತ್ತಿದೆ. ಈ ಸಂಸ್ಥೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟಕ್ಕೆ ತಲುಪಿರುವುದು ಧಾರವಾಡದ ಹೆಮ್ಮೆಯಾಗಿದೆ ಎಂದರು.
ನಗರದಲ್ಲಿ ಬರೀ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರೆ ಸಾಲದು. ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ವೃದ್ಧಿಸಲು ಕ್ರೀಡೆಗಳೂ ಬೇಕು. ಹೀಗಾಗಿ ಹು-ಧಾ ಅವಳಿನಗರದಲ್ಲಿ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಅವುಗಳು ಕ್ರೀಡಾಪಟುಗಳ ಉಪಯೋಗಕ್ಕೆ ಮುಕ್ತವಾಗಲಿವೆ. ಇನ್ನೂ ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಕ್ಲಬ್ನ ಮಾಜಿ ಅಧ್ಯಕ್ಷರಾದ ವಿ.ಡಿ. ಕಾಮರಡ್ಡಿ, ಎನ್.ವಿ.ಬಿದರಿಮಠ, ಸಿ.ವಿ.ಮರದ, ಎನ್.ಕೆ. ಎಲ್. ಮಾಡೂಳ್ಳಿ, ಡಿ.ಎ.ಚಿಪ್ರೆ, ಎ.ಸಿ.ಪುರದ, ಬಿ.ಎಸ್.ಭಟ್, ರವಿ ನಾಯಕ, ರವಿ ಗಾಂವಕರ ಅವರಿಗೆ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಎಂ.ಎಂ. ಹಿರೇಮಠ, ಅಶೋಕ ಹಿರೇಮಠ, ಎಸ್.ಬಿ. ಕಿತ್ತೂರ, ವಿಜಯ ಸುಣಗಾರ, ಸಿ.ಎಚ್. ಜೋಗಿಹಳ್ಳಿ, ಎ.ಎಸ್. ಗುಡ್ಡಮಠ, ಎಂ.ಎಸ್. ಹಾಲಭಾವಿ, ಬಿ.ಎನ್. ಜಮಖಂಡಿ, ಎಚ್.ಎಫ್. ಹೆಬ್ಬಾಳ, ಪದಾಧಿಕಾರಿಗಳು, ಇತರರು ಇದ್ದರು.
ಕಾಸ್ಮಸ ಕ್ಲಬ್ ಅಧ್ಯಕ್ಷ ನಿತಿನ್ ಟಗರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಎಸ್.ಎಂ. ರುದ್ರಸ್ವಾಮಿ ವಂದಿಸಿದರು. ನಂತರ ಗಾಯಕಿ ಸಂಗೀತ ಕಟ್ಟಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.