ಜಿಲ್ಲೆ

ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಮಾರಕ

ಲೋಕಾಯುಕ್ತ ಇನ್​ಸ್ಪೆಕ್ಟರ್​ ಟಿ.ರಾಜು ಹೇಳಿಕೆ

 ಬುಕ್ಕಾಪಟ್ಟಣ : ಭ್ರಷ್ಟಾಚಾರವು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಸಾಮಾನ್ಯ ಜನರ ಆಶೋತ್ತರಗಳಿಗೆ ಕಂಟಕವಾಗುತ್ತಿದೆ ಎಂದು ತುಮಕೂರು ಜಿಲ್ಲೆ ಲೋಕಾಯುಕ್ತ ಇನ್​ಸ್ಪೆಕ್ಟರ್​ ಟಿ.ರಾಜು ತಿಳಿಸಿದರು.

ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹೂಯಿಲ್​ ದೊರೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೊಮವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸಂಪನ್ಮೂಲ ದೇಶದ ಜನಗಳಿಗೆ ಸಾಕಾಗುವಷ್ಟು ಇದೆ. ಆದರೆ ಜನರ ದುರಾಸೆಗಳನ್ನು ಈಡೇರಿಸುವಷ್ಟು ಇಲ್ಲ. ಹಾಗಾಗಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಹ ದೇಶದ ಸಂಪನ್ಮೂಲ ಸಮಾನವಾಗಿ ಹಂಚಿಕೆಯಾಗಬೇಕು ಎಂದರು.

ಭಷ್ಟಾಚಾರದಲ್ಲಿ ತೊಡಗುವ ಅಧಿಕಾರಿ ಎಷ್ಟು ಕಾನೂನಿನ ಅಡಿಯಲ್ಲಿ ತಪ್ಪಿತಸ್ಥನೋ ಅಷ್ಟೇ ಅಪರಾಧ ಲಂಚ ನೀಡುವ ವ್ಯಕ್ತಿಯೂ ಸಹ ತಪ್ಪಿತಸ್ಥ. ದೇಶದ ಜನರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು ಜನರ ಆಶೋತ್ತರಗಳನ್ನ ಈಡೇರಿಸಲು ಹಾಗೂ ಜನರ ಕಲ್ಯಾಣಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ ಎಂದರು.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಿಂದಲೇ ಭ್ರಷ್ಟಾಚಾರದ ವಿರುದ್ಧ ಹೋರಾಟದ ಮನೋಗುಣ ಬೆಳೆಸಿಕೊಳ್ಳಬೇಕು. ಕಣ್ಣೆದುರಿಗೆ ಆಗುವ ಎಲ್ಲ ಭ್ರಷ್ಟಾಚಾರಗಳನ್ನು ಎದುರಿಸಿ ನಿಲ್ಲುವ ಮನೋಧೈರ್ಯ ಹೊಂದಬೇಕು ಎಂದರು.