ತುಮಕೂರು : ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತವರು ಜಿಲ್ಲೆಯ ಸಣ್ಣ ನೀರಾವರಿ ವಿಭಾಗದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿಬಂದಿದೆ.
ನಿಯಮಗಳನ್ನು ಗಾಳಿಗೆ ತೂರಿ ಬೆರಳೆಣಿಕೆಯಷ್ಟು ಗುತ್ತಿಗೆದಾರರಿಗೆ ಟೆಂಡರ್ ನೀಡುತ್ತಿರುವ ಇಲಾಖೆಯ ಕಾರ್ಯವೈಖರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಪಿಟಿಟಿ) ಕಾಯ್ದೆ ಉಲ್ಲಂಘನೆ ಮಾಡಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟದ ಜತೆಗೆ ಕಳಪೆ ಕಾಮಗಾರಿಗೆ ಕಾರಣವಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ಕೊಡುವ 2 ತಿಂಗಳು ಮುನ್ನವೇ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದು ಇಡೀ ಇಲಾಖೆಯೇ ಭ್ರಷ್ಟಾಚಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿಯಾಗಿದೆ.
ಟೆಂಡರ್ ಗೋಲ್‌ಮಾಲ್: ಸಣ್ಣ ನೀರಾವರಿ ಇಲಾಖೆ ಅಡಿ ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಸುಮಾರು 2 ಕೋಟಿ ರೂ., ಅಂದಾಜು ವೆಚ್ಚದ ಕಾಮಗಾರಿಯನ್ನು ಟೆಂಡರ್ ಪ್ರಕ್ರಿಯೆ ಆರಂಭಿಸುವ ಮುನ್ನವೇ ಕೈಗೆತ್ತಿಕೊಳ್ಳಲಾಗಿದೆ. ಇದು ಟೆಂಡರ್‌ನಲ್ಲಿ ಗೋಲ್ ಮಾಲ್ ನಡೆದಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಸಾಮಾಜಿಕ ಹೋರಾಟಗಾರ ಇಮ್ರಾನ್ ಪಾಷ ಮಾಹಿತಿ ಹಕ್ಕು ಕಾಯ್ದೆ ಅಡಿ ತಿಂಗಳ ಹಿಂದೆಯೇ ಕೇಳಿರುವ ಮಾಹಿತಿಯನ್ನು ಕೊಡದಿರುವುದು ಟೆಂಡರ್ ಅವ್ಯವಹಾರಕ್ಕೆ ಪುಷ್ಟೀಕರಿಸಿದೆ.
ಸಚಿವರನ್ನೇ ಬೆದರಿಸುತ್ತಾರೆ ಅಧಿಕಾರಿಗಳು? : ಸಣ್ಣ ನೀರಾವರಿ ಇಲಾಖೆ ತುಮಕೂರು ವಿಭಾಗದಲ್ಲಿ ತಾಂತ್ರಿಕ ವಿಭಾಗವೇ ಭ್ರಷ್ಟಾಚಾರದ ಸೂತ್ರಧಾರಿ. ಗುತ್ತಿಗೆದಾರರ ಜತೆ ಸೇರಿಕೊಂಡು ಟೆಂಡರ್ ಪ್ರಕ್ರಿಯೆ ನಿಯಮಗಳನ್ನು ಗಾಳಿಗೆ ತೂರಲಾಗಿದ್ದರೂ ಸಚಿವರು ಮೌನವಾಗಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಸಹಾಯಕ ಇಂಜಿನಿಯರ್ ಸುಷ್ಮಾ ಕಳೆದ ಹತ್ತು ವರ್ಷದಿಂದ ವಿಭಾಗದಲ್ಲಿ ತಳವೂರಿದ್ದಾರೆ. ಸಚಿವ ಮಾಧುಸ್ವಾಮಿಗೂ ಬಗ್ಗದ ಅಧಿಕಾರಿಗಳು ಅವರನ್ನೇ ಕಪಿಮುಷ್ಠಿಯಲ್ಲಿಟ್ಟುಕೊಂಡು ಬೆದರಿಸುತ್ತಿದ್ದಾರೆ ಎನ್ನುತ್ತಾರೆ ಸಣ್ಣ, ಪುಟ್ಟ ಗುತ್ತಿಗೆದಾರರು.
ಆನ್‌ಲೈನ್ ಅಪ್ಡೇಟ್ ಆಗುತ್ತಿಲ್ಲ! ತುಮಕೂರು ವಿಭಾಗದಲ್ಲಿ ನಡೆಯುತ್ತಿರುವ ಕೋಟಿಗಟ್ಟಲೆ ಕಾಮಗಾರಿಯ ಅಂತಿಮ ಮಾಹಿತಿ ಇ-ಪ್ರಕ್ಯೂರ್‌ಮೆಂಟ್‌ನಲ್ಲಿ ಪ್ರಕಟಿಸದಿರುವುದು ಅಕ್ರಮದ ಬಗ್ಗೆ ಶಂಕೆ ಮೂಡಿಸಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವೇ ಜನರು ಮಾತ್ರ ಭಾಗಿಯಾಗುವಂತೆ ನೋಡಿಕೊಂಡು ಹೊಸಬರಿಗೆ ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ. ಬೆರಳೆಣಿಕೆಯಷ್ಟು ಪ್ರಭಾವಿ ಗುತ್ತಿಗೆದಾರರು ಇಡೀ ಇಲಾಖೆಯನ್ನು ನಿಯಂತ್ರಿಸುತ್ತಿರುವುದು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಪಟ್ಟಿ ನೋಡಿದರೆ ದೃಢವಾಗುತ್ತದೆ.
ಟೆಂಡರ್ ಸಲ್ಲಿಕೆಗೆ 7 ದಿನದ ಮೇಲೆ 1 ಗಂಟೆ ಅವಕಾಶ!: ಶೆಟ್ಟಿಹಳ್ಳಿ, ಗಂಗಸಂದ್ರ ಸೇರಿ 15 ಕೋಟಿ ರೂ.,ಗೂ ಹೆಚ್ಚು ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಹೆಸರಲ್ಲಿ ಆಹ್ವಾನಿಸಿರುವ ದ್ವಿ ಲಕೋಟೆ ಟೆಂಡರ್‌ಗೆ ಕೇವಲ 7 ದಿನ ಅವಕಾಶ ನೀಡಿರುವುದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಅಲ್ಲದೆ, ಟೆಂಡರ್ ಕರೆದು ಕಾಮಗಾರಿ ಕಾರ್ಯಾದೇಶ ನೀಡುವ ಮುನ್ನವೇ ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿರುವುದು ಭ್ರಷ್ಟಾಚಾರಕ್ಕೆ ಸ್ಪಷ್ಟ ನಿದರ್ಶನ ಎನಿಸಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಪ್ರಕಾರ ಕನಿಷ್ಠ 30 ದಿನ ಟೆಂಡರ್ ಸಲ್ಲಿಕೆಗೆ ಅವಕಾಶ ನೀಡಬೇಕು. ಆದರೆ, ತಮಗೆ ಬೇಕಾದವರಿಗೆ ಗುತ್ತಿಗೆ ನೀಡುವ ಸಲುವಾಗಿ ತಂತ್ರಾಂಶದಲ್ಲಿ ಸಾಧ್ಯವಿರುವ 7 ದಿನದ ಜತೆಗೆ ಕೇವಲ ಒಂದು ಗಂಟೆ ಮಾತ್ರ ಅವಕಾಶ ನೀಡಿರುವುದು ಕೆಟಿಪಿಪಿ ನಿಯಮ ಗಾಳಿಗೆ ತೂರಿರುವ ಸ್ಪಷ್ಟ ಉದಾಹರಣೆಯಾಗಿದೆ. ತುಮಕೂರು ಸಣ್ಣ ನೀರಾವರಿ ಇಲಾಖೆ ಬಹುತೇಕ ಟೆಂಡರ್‌ಗಳೆಲ್ಲ ಇದೇ ತೆರನಾಗಿ ನಡೆದಿದೆ.
ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಕಳೆದ ಒಂದೂವರೆ ತಿಂಗಳಿನಿಂದ ಭರದಿಂದ ಸಾಗಿದ್ದು ಈ ಬಗ್ಗೆ ಆರ್‌ಟಿಐ ಅಡಿ ಮಾಹಿತಿ ಕೇಳಲಾಗಿತ್ತು. ನಿಯಮಾನುಸಾರ 30 ದಿನದೊಳಗೆ ಮಾಹಿತಿ ಒದಗಿಸಬೇಕು. ಆದರೆ, ಪ್ರಾಥಮಿಕ ಅಂಶಗಳುಳ್ಳ ಸರಳ ಮಾಹಿತಿಗಳನ್ನು ಒದಗಿಸದೇ ಗೌಪ್ಯವಾಗಿಟ್ಟಿರುವುದು ಭ್ರಷ್ಟಾಚಾರದ ಗುಮಾನಿ ಹುಟ್ಟುಹಾಕಿದೆ. ಇಮ್ರಾನ್ ಪಾಷ, ಸಾಮಾಜಿಕ ಹೋರಾಟಗಾರ ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು 15 ದಿನಗಳಾಗಿದೆ. 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಇದ್ದಾಗಿದ್ದು ಇನ್ನೆರಡು ದಿನಗಳಲ್ಲಿ ಕಾರ್ಯಾದೇಶ ಕೊಡಲಾಗುವುದು. ರವಿ ಸೂರನ್ ಇಇ, ಸಣ್ಣ ನೀರಾವರಿ ಇಲಾಖೆ