ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಸಪ್ತಾಹದಲ್ಲಿ ಲೋಕಾಯುಕ್ತ ಇನ್​ಸ್ಪೆಕ್ಟರ್​ ಜೆ.ರಮೇಶ್​ ಪ್ರಮಾಣ ವಚನ ಭೋದಿಸಿದರು. ನಗರ ಠಾಣೆ ಇನ್​ಸ್ಪೆಕ್ಟರ್​ ಅಮರೇಶ್​ ಗೌಡ, ವಕೀಲ ಮಧುಸೂದನ್​, ಮಹಿಳಾ ಠಾಣೆ ಸಬ್​ ಇನ್​ಸ್ಪೆಕ್ಟರ್​ ಶುಭಾ, ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್​ ಇದ್ದರು. 
ಜಿಲ್ಲೆ

ಮನೋಭಾವ ಬದಲಾಗದೆ ಭ್ರಷ್ಟಾಚಾರ ತಡೆ ಅಸಾಧ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಪ್ರೇರಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಲೋಕಾಯುಕ್ತ ಇನ್​ಸ್ಪೆಕ್ಟರ್​ ಜೆ.ರಮೇಶ್​ ಹೇಳಿದರು. ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರು ಜಿಲ್ಲಾ ಪೊಲೀಸ್​, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಾಯುಕ್ತ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ 2025ರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅನ್ಯಾಯ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಜನರಲ್ಲಿ ಮನೋಭಾವ ಬದಲಾಗದೆ ಭ್ರಷ್ಟಾಚಾರ ತಡೆ ಅಸಾಧ್ಯ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಹಾಗೂ ಹೋರಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದರು.

ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕತೆ, ಪಾರದರ್ಶಕತೆವಾಗಿ ಪಾಳಿಸಬೇಕು. ಭ್ರಷ್ಟಾಚಾರ ರಹಿತ ಸಮಾಜ ನಿಮಾರ್ಣ ಎಲ್ಲರ ಕನಸು. ಅಧಿಕಾರಿಗಳು ಇದನ್ನು ತಡೆಗಟ್ಟಲು ಅರಿವು ಕಾರ್ಯಕ್ರಮಗಳು, ಪೋಸ್ಟರ್​ ಪ್ರದರ್ಶನಗಳು ಮತ್ತು ಸಮಗ್ರತೆ ಉತ್ತೇಜಿಸುವ ಸೇರಿ ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು. ಭ್ರಷ್ಟಾಚಾರ ವಿರೋಧಿ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಇ&ಆಡಳಿತ ತಂತ್ರಜ್ಞಾನ ಅಳವಡಿಕೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುವ ಸಾಧನಗಳಾಗಿವೆ. ಭ್ರಷ್ಟಾಚಾರ ನಿಮೂರ್ಲನೆಯಲ್ಲಿ ಲೋಕಾಯುಕ್ತ ಸಂಸ್ಥೆಯೊಂದಿಗೆ ಸಾರ್ವಜನಿಕರು ಸಾಮೂಹಿಕವಾಗಿ ಹೋರಾಟಕ್ಕಿಳಿದರೇ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.