ಜಿಲ್ಲೆ

ಅಗತ್ಯಕ್ಕಿಂತ ದರ ನಮೂದಿಸುವ ಮೂಲಕ ಭ್ರಷ್ಟಾಚಾರ: ಆರೋಪ

ಆರ್.ಕೃಷ್ಣ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಾಮಗಾರಿ, ವಸ್ತುಗಳಿಗೆ ಅಗತ್ಯಕ್ಕಿಂತ ದರ ನಮೂದಿಸುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆ ಎಂದು ವಕೀಲ ಪುಟ್ಟಸ್ವಾಮಿಗೌಡ ದೂರಿದರು.

ಡ್ರೋನ್ ಬಳಸಿ ವಿಶ್ವವಿದ್ಯಾಲಯದ ಕಟ್ಟಡಗಳ ವರ್ಚ್ಯುಯಲ್ ಟೂರ್, ಕಟ್ಟಡ ನವೀಕರಣ ಮೊದಲಾದವುಗಳಿಗೆ ವೆಚ್ಚ ಮಾಡುವ ಸಂದರ್ಭದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಈ ನೆಪದಲ್ಲಿ ವಿವಿಯ ಹಣವನ್ನು ಹಲವರು ಲೂಟಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿನ ಕಟ್ಟಡಗಳ ಕೆಲ ನಿಮಿಷಗಳ ವರ್ಚ್ಯುಯಲ್ ಟೂರ್ ನ್ಯಾಕ್‌ಗೆ ಅಗತ್ಯವಾಗಿತ್ತು. ಅದನ್ನು ಖಾಸಗಿ ಕಂಪನಿಯೊಂದರಿಂದ ಡ್ರೋನ್ ಬಳಸಿ ದೃಶ್ಯೀಕರಿಸಿದ್ದಾರೆ. ಇದಕ್ಕಾಗಿ 26 ಲಕ್ಷ ರೂ. ಬಿಲ್ ಮಾಡಿರುವುದು ಆಶ್ಚರ್ಯ ಮೂಡಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಷ್ಟು ದೊಡ್ಡ ಮೊತ್ತದ ಕೆಲಸದ ಬಗ್ಗೆ ಹೊರಗಡೆ ವಿಚಾರಿಸಿದಾಗ ಕೇವಲ 30 ರಿಂದ 35 ಸಾವಿರ ರೂ.ನಲ್ಲಿ ಮಾಡಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ನೀಡಲು ಬಳಸುವ ಬ್ಯಾಗ್‌ಗೆ 120 ರೂ. ಬಿಲ್ ಮಾಡಲಾಗಿದೆ. ನಗರದ ಶಿವರಾಂಪೇಟೆಗೆ ಹೋಗಿ ಯಾವುದೇ ಅಂಗಡಿಯಲ್ಲಿ ವಿಚಾರಿಸಿದರೂ ಇದು ಕೇವಲ 30 ರೂ.ಗೆಲ್ಲಾ ಸಿಗುತ್ತದೆ. ಒಟ್ಟು 50 ಸಾವಿರ ಬ್ಯಾಗ್ ಖರೀದಿಸಲಾಗಿದೆ ಎಂದು ದೂರಿದರು.

ಚಾಮರಾಜನಗರದ ಒಂದು ಕಟ್ಟಡ ಹಾಗೂ ಮಂಡ್ಯದ ಒಂದು ಕಟ್ಟಡದ ಡ್ರೋನ್ ವರ್ಚ್ಯುಯಲ್ ಟೂರ್ ಚಿತ್ರೀಕರಣಕ್ಕೆ ತಲಾ 5 ಲಕ್ಷ ರೂ. ಬಿಲ್ ಮಾಡಿಸಲಾಗಿದೆ. ಈ ನಡುವೆ, ವಿದ್ಯಾರ್ಥಿಗಳು ಮುಗಿಸಿದ ಅಸೈನ್ಮೆಂಟ್ ಪ್ರತಿಗಳನ್ನು ಡಿಜಿಟಲೀಕರಿಸಲು ತಲಾ 250 ರೂ. ನೀಡಿರುವುದಾಗಿ ತಿಳಿಸಲಾಗಿದೆ. ಆದರೆ ನಗರದ ಎಂಜಿನಿಯರಿಂಗ್ ಹಾಗೂ ಇನ್ನಿತರ ಕಾಲೇಜು ವಿದ್ಯಾರ್ಥಿಗಳು ಇದನ್ನು ಸುಲಭವಾಗಿ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಆವರಣದಲ್ಲಿನ ಒಂದು ಕಟ್ಟಡದ ಕಿಟಕಿ, ಬಾಗಿಲು ಬದಲಿಸಲು ಒಟ್ಟಾರೆ ಏಳು ಕೋಟಿ ರೂ. ನೀಡಲಾಗಿದೆ. ಇಷ್ಟೇ ಹಣದಲ್ಲಿ ಆ ರೀತಿಯ ಒಂದು ಹೊಸ ಕಟ್ಟಡವನ್ನೇ ನಿರ್ಮಿಸಬಹುದಾಗಿತ್ತು. ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿನ ಒಂದು ಕಟ್ಟಡದ 20 ಕೊಠಡಿಗಳ ಬೆಡ್ ಹಾಗೂ ದಿಂಬಿಗಾಗಿ 50 ಲಕ್ಷ ರೂ. ನೀಡಲಾಗಿದೆ ಎಂದು ದೂರಿದರು.

ಈ ರೀತಿ ನೂರಾರು ಕೋಟಿ ರೂ. ಇಲ್ಲಿ ಲೂಟಿ ಮಾಡಲಾಗಿದ್ದು, ಕೇವಲ ಲೋಕಾಯುಕ್ತರ ಸಮಗ್ರ ತನಿಖೆಯಿಂದಷ್ಟೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ. ಹೀಗಾಗಿ ಸರ್ಕಾರ ಇತ್ತ ಗಮನ ಹರಿಸಬೇಕಿದೆ ಎಂದು ಕೋರಿದರು. ವಕೀಲ ಸಂತೋಷ್ ಇತರರಿದ್ದರು.