ಜಿಲ್ಲೆ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ 13.92 ಕೋಟಿ ರೂ. ನಷ್ಟ

ಸಚಿವ ಶಿವಾನಂದ ಪಾಟೀಲ ಮಾಹಿತಿ

ಆಡಳಿತ ಮಂಡಳಿ ವಿರುದ್ಧ ವಿಚಾರಣೆಗೆ ಅನುಮತಿ

ಇಬ್ಬರು ಅಧಿಕಾರಿಗಳ ವಿರುದ್ಧವೂ ತನಿಖೆಗೆ ಸೂಚನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಒಟ್ಟು 13.92 ಕೋಟಿ ರೂ. ನಷ್ಟ ಉಂಟಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್​ ಪ್ರಾಸಿಕ್ಯೂಷನ್​ಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅನುಮತಿ ನೀಡಿದ್ದಾರೆ.

ಕಾರ್ಖಾನೆಗೆ ಆರ್ಥಿಕ ನಷ್ಟ ಉಂಟಾಗಲು ಆಡಳಿತ ಮಂಡಳಿ, ಟೆಂಡರ್​ ಕಮ್​ ಹರಾಜಿನ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಆಗಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರವೀಣ ಬಿ. ನಾಯಕ ಮತ್ತು ಜಿ.ಎನ್​. ಲಕ್ಷ್ಮೀನಾರಾಯಣ ಅವರ ನಿರ್ಲಕ್ಷ್ಯವೇ ಕಾರಣ ಎಂಬುದು ತನಿಖಾ ವರದಿಯಿಂದ ತಿಳಿದು ಬಂದಿದೆ ಎಂದು ಸಚಿವ ಪಾಟೀಲ ಬೆಂಗಳೂರಿನಿಂದ ಆಗಸ್ಟ್​ 18ರಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಷ್ಟ ವಸೂಲಿಗೆ ಸೂಚನೆ

ಈ ಹಿಂದೆ ದಾಖಲಾಗಿದ್ದ ಕ್ರಿಮಿನಲ್​ಮೊಕದ್ದಮೆಗೆ ಸಂಬಂಧಿಸಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಇಬ್ಬರ ವಿರುದ್ಧವೂ ಕ್ರಿಮಿನಲ್​ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ. ಅಲ್ಲದೆ, ಅವ್ಯವಹಾರದಲ್ಲಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗಿದೆ. ನಷ್ಟದ ಹಣವನ್ನು ಸಂಬಂಧಪಟ್ಟವರಿಂದ ವಸೂಲು ಮಾಡಲು ಸೂಚಿಸಿದ್ದಾಗಿ ಸಚಿವ ಪಾಟೀಲ ತಿಳಿಸಿದ್ದಾರೆ.

ಟೆಂಡರ್​ ಪ್ರಕ್ರಿಯೆಯಲ್ಲಿ ಅವ್ಯವಹಾರ ಸಾಬೀತು

ಶಿವಾನಂದ ಪಾಟೀಲ

ಸರ್ಕಾರದ ಅನುಮತಿ ಪಡೆದು ಬ್ರಹ್ಮಾವರದ ಆಡಳಿತ ಮಂಡಳಿಯು ಕಾರ್ಖಾನೆಯ ಕಟ್ಟಡ ಮತ್ತು ಯಂತ್ರೋಪಕರಣಗಳನ್ನು ಚೆನ್ನೈನ ನ್ಯೂ ರಾಯಲ್​ ಟ್ರೇಡರ್ಸ್​ಗೆ ಮಾರಾಟ ಮಾಡಿತ್ತು. ಈ ಟೆಂಡರ್​ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಧಾನ ಪರಿಷತ್​ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಅವ್ಯವಹಾರದ ಆರೋಪ ಕೇಳಿ ಬಂದಾಗ ತನಿಖೆಗೆ ಜಿಲ್ಲಾ ನಿವೃತ್ತ ನ್ಯಾಯಾಧೀಶ ಕೆ.ರಾಧಾಕೃಷ್ಣ ಹೊಳ್ಳ ಅವರನ್ನು ನೇಮಕ ಮಾಡಲಾಗಿತ್ತು. ಅವರು ಸಲ್ಲಿಸಿರುವ ವರದಿಯಲ್ಲಿ ಅವ್ಯವಹಾರ ಸಾಬೀತಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.