ಜಿಲ್ಲೆ

ಭ್ರಷ್ಟ ಆಡಳಿತದಿಂದಾಗಿ ಬಿಜೆಪಿಗೆ ಸೋಲು

ಅಶೋಕ್ ಕುಮಾರ್ ಎನ್

ಮಸ್ಕಿ: ಚುನಾವಣೆ ಬಂದಾಗ ಡ್ರಾಮಾ ಮಾಡುವವರನ್ನು ಮಸ್ಕಿ ಕ್ಷೇತ್ರದ ಮತದಾರರು ಮನೆಗೆ ಕಳಿಸಿದ್ದಾರೆ. ಕ್ಷೇತ್ರದ ಮತದಾರರು ಪ್ರಭುದ್ಧರಿದ್ದು, ಅಭಿವೃದ್ಧಿ ಪರ ಇರುವವರಿಗೆ ಮಣೆ ಹಾಕಿದ್ದಾರೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ರಸ್ತೆ, ನೀರಾವರಿ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸುವ ಕೆಲಸ ಮಾಡುವೆ ಎಂದರು.

ಬಿಜೆಪಿಯ ಭ್ರಷ್ಟ ಆಡಳಿತದಿಂದಾಗಿ ಆ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡಲಿದೆ ಎಂಬ ಕಾರಣಕ್ಕೆ ನಮ್ಮನ್ನು ಗೆಲ್ಲಿಸಿದ್ದಾರೆ. ಬಡವರ, ದೀನ-ದಲಿತರ ಪರ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇದೆ. ಲೋಕಸಭೆ ಚುನಾವಣೆಗಳು ಬರಲಿದ್ದು, ಕಾಂಗ್ರೆಸ್ ಕಾರ್ಯಕರ್ತರು ಯುದ್ಧಕ್ಕೆ ಸದಾ ಸಿದ್ಧರಿರುವ ಸೈನಿಕರಂತೆ ಕೆಲಸ ಮಾಡಬೇಕು. ಕೊಟ್ಟ ಮಾತಿನಂತೆ ಕನಕ ನಾಲೆ, 5ಎ ಯೋಜನೆ ಜಾರಿ ಮಾಡಿಸುವ ಪ್ರಯತ್ನ ಮಾಡುವೆ ಎಂದು ಶಾಸಕ ತುರ್ವಿಹಾಳ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಗೆಲುವು ದಾಖಲಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬದ್ದವಾಗಿದೆ. ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಅಡ್ಡಗಾಲು ಹಾಕುತಿದ್ದಾರೆ ಎಂದು ದೂರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರು, ಯುವ ಘಟಕದ ಅಧ್ಯಕ್ಷ ಹನುಮೇಶ್ ಬಾಗೋಡಿ, ಜಿಲ್ಲಾ ಉಪಾಧ್ಯಕ್ಷ ವೆಂಕಟರಡ್ಡಿ ಹಾಲಾಪುರು, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಫಾರುಕ್ ಸಾಬ್, ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರು, ಪ್ರಮುಖರಾದ ಪಾಮಯ್ಯ ಮುರಾರಿ, ಎಚ್.ಬಿ.ಮುರಾರಿ, ಮಲ್ಲನಗೌಡ ದೇವರಮನೆ, ಶ್ರೀಶೈಲಪ್ಪ ಬ್ಯಾಳಿ, ಶಿವನಗೌಡ ಗೊರೇಬಾಳ, ನಿರೂಪಾದೆಪ್ಪ ವಕೀಲ, ಮಲ್ಲಯ್ಯ ಬಳ್ಳಾ, ಮಲ್ಲನಗೌಡ ಸುಂಕನೂರು, ಹನುಮಂತಪ್ಪ ವೆಂಕಟಾಪುರ, ಶರಣಬಸವ ಮಟ್ಟೂರು, ಮಹಿಬೂಬ್ ಸಾಬ್ ಮುದ್ದಾಪುರ, ದುರ್ಗೇಶ ವಕೀಲ, ಮಲ್ಲಯ್ಯ ಮುರಾರಿ, ಶರಣೇಗೌಡ ಬುಕನಟ್ಟಿ, ಶಬ್ಬೀರ್ ಸಾಬ್, ಹಜರತಸಾಬ್ ಇತರರಿದ್ದರು.