ಕಡೂರು: ಸರ್ವೇ ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿರುವ ಪರವಾನಗಿ ಭೂ ಮಾಪಕರಿಗೆ ಸರ್ಕಾರಿ ಭೂ ಮಾಪಕರಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಿ ಪರವಾನಗಿ ಭೂ ಮಾಪಕರ ತಾಲೂಕು ಸಂಘದ ಗೌರವಾಧ್ಯಕ್ಷ ಕೆ.ಟಿ.ಮಲ್ಲಿಕಾರ್ಜುನ್ ಒತ್ತಾಯಿಸಿದರು.
ತಾಲೂಕು ಕಚೇರಿಯ ಭೂ ದಾಖಲೆ ಕಚೇರಿಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿ, ಈಗಾಗಲೇ ನ್ಯಾಯಯುತ ಬೇಡಿಕೆ ಹೋರಾಟಕ್ಕೆ ತಾಲೂಕು ಸಂಘವನ್ನು ಸ್ಥಾಪಿಸಲಾಗಿದೆ. ಸರ್ವೇ ಕಾರ್ಯಕ್ಕೆ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕಠಿಣ ತರಬೇತಿ ಪಡೆದು ನಿಯೋಜನೆಗೊಂಡ ತಾಲೂಕಿನಲ್ಲಿ ಭೂ ಮಾಪಕರಾಗಿ ಸತತ 23 ವರ್ಷಗಳಿಂದ ಸೇವೆ ಸಲ್ಲಿಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಭದ್ರತೆ ಇಲ್ಲದಿರುವುದು ನೋವಿನ ಸಂಗತಿ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ಪ್ರಕಾಶ್ ಮಾತನಾಡಿ, ಪರವಾನಗಿ ಭೂ ಮಾಪಕರು ಮಾಡಿದ ಕೆಲಸಕ್ಕೆ ನ್ಯಾಯಯುತವಾಗಿ ಹಣ ಸಂದಾಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಂಘದ ಮೂಲಕವೇ ಒಗ್ಗಟ್ಟಿನ ಮೂಲಕ ಸರ್ಕಾರದ ಗಮನಸೆಳೆಯಲು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದ ಎಂದರು. ಸರ್ಕಾರಿ ಪರವಾನಗಿ ಭೂಮಾಪಕರ ಜಿಲ್ಲಾಧ್ಯಕ್ಷ ರೇವಣ್ಣ ಅವರ ಸಮ್ಮುಖದಲ್ಲಿ ತಾಲೂಕು ಸಂಘ ರಚನೆ ಮಾಡಲಾಯಿತು. ಅಧ್ಯಕ್ಷ ಎಂ.ಆರ್.ನಾಗರಾಜ್, ಉಪಾಧ್ಯಕ್ಷ ಚಲುವೇಗೌಡ, ಖಜಾಂಚಿ ಅಣ್ಣಪ್ಪ ಹಾಗೂ ಸಂಘದ ಸದಸ್ಯರು ಇದ್ದರು.