ಮಡಿಕೇರಿ: ಇದುವರೆಗೆ ದಾಖಲೆ ಇಲ್ಲದಿರುವ ಶಾಲಾ-ಕಾಲೇಜುಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಜತೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಸಂಬಂಧ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಇನ್ನೂ ಸಹ ಹಲವು ಶಾಲಾ-ಕಾಲೇಜಿಗೆ ಆರ್‌ಟಿಸಿ ಅಥವಾ ೯/೧೧ ಇ-ಸ್ವತ್ತು ಇಲ್ಲದಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ದಾಖಲೆಗಳನ್ನು ಸರ್ಕಾರಿ/ ಸಂಸ್ಥೆಯ ಹೆಸರಿಗೆ ಮಾಡಿಸಿಕೊಳ್ಳಬೇಕು. ಸರ್ಕಾರ ಎಪಿಕ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುತ್ತಿದ್ದು, ಇದನ್ನು ಶೇ.೧೦೦ ರಷ್ಟು ಪ್ರಗತಿ ಸಾಧಿಸಬೇಕು. ಕೊಡಗು ಜಿಲ್ಲೆಯಲ್ಲಿ ಶೇ.೧೨ ರಷ್ಟು ಮಾತ್ರ ಆಗಿದ್ದು, ಹೆಚ್ಚಿನ ಪ್ರಗತಿ ಸಾಧಿಸಲು ಎಲ್ಲರೂ ಕೈಜೋಡಿಸುವಂತೆ ಡಾ.ಬಿ.ಸಿ.ಸತೀಶ ಹೇಳಿದರು.
೧೮ ವರ್ಷ ಮೇಲ್ಪಟ್ಟವರು ಮತದಾರರ ಗುರುತಿನ ಚೀಟಿ ಮಾಡಿಸದಿದ್ದಲ್ಲಿ ಆನ್‌ಲೈನ್ ಅಥವಾ ಮ್ಯಾನ್ಯುಯಲ್ ಮೂಲಕ ನೋಂದಣಿ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ೧೮ ವರ್ಷ ಮೇಲ್ಪಟ್ಟವರೆಲ್ಲರೂ ಮತದಾರರ ಗುರುತಿನ ಚೀಟಿ ಪಡೆಯಲು ಮುಂದಾಗಬೇಕು. ಜೊತೆಗೆ ಮತದಾರರ ಗುರುತಿನ ಚೀಟಿ ಪಡೆದಿರುವವರೆಲ್ಲರೂ ಆಧಾರ್ ಲಿಂಕ್ ಮಾಡಿಸುವಂತಾಗಬೇಕು. ಆ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಪ್ರಗತಿ ಸಾಧಿಸಲು ಶ್ರಮಿಸುವಂತೆ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ೧೮ ವರ್ಷ ಮೇಲ್ಪಟ್ಟ ಈಗಾಗಲೇ ಮತದಾರರ ಗುರುತಿನ ಚೀಟಿ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳು ಆಧಾರ್ ಲಿಂಕ್ ಮಾಡಿಸಬೇಕು ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟರಾಜು ಹಲವು ಕಾಲೇಜುಗಳ ದಾಖಲೆಯು ಪ್ರೌಢಶಾಲೆಯ ಮುಖ್ಯೋಪಾಧ್ಯಯರ ಹೆಸರಿನಲ್ಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಇದ್ದರು.