ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೊಳ್ಳಲಾಗುವ ಸಿವಿಲ್ ಕಾಮಗಾರಿಗಳಿಂದ ಸೃಜನೆಯಾಗುವ ಕಟ್ಟಡ ಭಗ್ನಾವಶೇಷ (ಡೆಬ್ರಿಸ್) ನಿವಾರಣೆ ಮತ್ತು ನಿರ್ಮೂಲನೆಗಾಗಿ ತಗಲುವ ವೆಚ್ಚವನ್ನು ಆಯಾ ಕಾಮಗಾರಿಯ ಬಿಲ್‌ಗಳಲ್ಲಿ ಕಡಿತಗೊಳಿಸುವ ಕುರಿತು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಗುರುವಾರ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಘನತ್ಯಾಜ್ಯದ ಜತೆ ಕಟ್ಟಡ ತ್ಯಾಜವು ದೊಡ್ಡ ಮಟ್ಟದಲ್ಲಿ ಸೃಜನೆಯಾಗಿ ವಿಲೇವಾರಿ ಕಷ್ಟವಾಗುತ್ತಿದೆ. ಖಾಸಗಿಯವರು ಕಟ್ಟಡ ಅವಶೇಷವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಸುರಿದು ಹೋಗುವ ಪ್ರಕರಣಗಳು ಮುಂದುವರಿಯುತ್ತಿವೆ. ಹಳೆಯ ಕಟ್ಟಡಗಳನ್ನು ಕಡವಿ ಹೊಸ ಬಿಲ್ಡಿಂಗ್ ನಿರ್ಮಿಸುವ ವೇಳೆ ಡೆಬ್ರಿಸ್ ಅನ್ನು ನಿಗದಿತ ಜಾಗದಲ್ಲಿ ಹಾಕಲಾಗುತ್ತಿಲ್ಲ. ಆದ್ದರಿಂದ ಹೊಸ ಸಮಸ್ಯೆ ಸೃಷ್ಟಿಯಾಗಿ ಅದನ್ನು ವಿಲೇವಾರಿ ಮಾಡುವುದೇ ಸವಾಲು ಎದುರಾಗಿದೆ. ಈಗ ಪಾಲಿಕೆ ವತಿಯಿಂದ ಕೈಗೊಳ್ಳುವ ಕಾಮಗಾರಿಗಳ ವೇಳೆ ಸೃಜನೆಯಾಗುವ ಕಟ್ಟಡ ಅವಶೇಷವನ್ನು ಆಯಾ ಗುತ್ತಿಗೆದಾರರಿಂದ ತೆರವುಗೊಳಿಸಬೇಕು ಮತ್ತು ಸಂಬಂಧಿಸಿದ ಅಧಿಕಾರಿಯು ನಿರಂತರ ಉಸ್ತುವಾರಿ ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಅನುಷ್ಠಾನಾಧಿಕಾರಿಯಾಗಿ ಎಇಇ ನೇಮಕ:
ಕಾಮಗಾರಿ ಮುಕ್ತಾಯಗೊಂಡ ನಂತರವು ಸಹ ಯಾವುದೇ ತೆರನಾದ ಕಟ್ಟಡ ಭಗ್ನಾವಶೇಷ ಸೃಜಿಸದಂತೆ ಆಯಾ ಗುತ್ತಿಗೆದಾರರಿಗೆ ಸೂಚಿಸಲು ಕಟ್ಟಪ್ಪಣೆ ಮಾಡಲಾಗಿದೆ. ಒಂದು ವೇಳೆ, ಕಾಮಗಾರಿ ಮುಕ್ತಾಯಗೊಂಡ ನಂತರವೂ ಡೆಬ್ರಿಸ್ ಸೃಜಿಸಿ ತೆರವುಗೊಳಿಸದಿದ್ದಲ್ಲಿ, ಪಾಲಿಕೆಯಿಂದಲೇ ತೆರವುಗೊಳಿಸಿ ಅಂತಿಮ ಬಿಲ್‌ನಲ್ಲಿ ವಿಲೇವಾರಿ ವೆಚ್ಚದ 1.5 ಪಟ್ಟು (ಶೇ.150) ಕಟಾವಣೆ ಮಾಡಲಾಗುತ್ತದೆ. ಜತೆಗೆ ಈ ಆದೇಶದಲ್ಲಿರುವ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ವಲಯಗಳ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರಿಗೆ ಸೂಚಿಸಲಾಗಿದೆ. ಇದರ ಅನುಷ್ಠಾನಾಧಿಕಾರಿಯಾಗಿ ವಿಭಾಗೀಯ ಕಾರ್ಯಪಾಲಕ ಅಭಿಯಂತರ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಅವರನ್ನು ನೇಮಿಸಲಾಗಿದೆ.