ಜಿಲ್ಲೆ

ಆ.9ರಿಂದ 17ರವರೆಗೆ ಪಾಲಿಕೆ ಅಧಿಕಾರಿ/ನೌಕರರ ಕ್ರೀಡಾಕೂಟ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನಡೆಯುವ 2024-25ನೇ ಸಾಲಿನ ಕೆಂಪೇಗೌಡ ದಿನಾಚರಣೆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿ, ನೌಕರರಿಗೆ ಆ.9ರಿಂದ 17ರವರೆಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 9.45ಕ್ಕೆ ಬಿಬಿಎಂಪಿಯ ಆಡಳಿತಗಾರ ಎಸ್.ಆರ್.ಉಮಾಶಂಕರ್ ಚಾಲನೆ ನೀಡಲಿದ್ದಾರೆ. ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿರುತ್ತಾರೆ. ಕ್ರೀಡಾಕೂಟದಲ್ಲಿ ಒಳಾಂಗಣ ಹಾಗೂ ಹೊರಾಂಗಣ ಸ್ಪರ್ಧೆಗಳನ್ನು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪೇಗೌಡ ಜಯಂತಿಗೆ ಕೊಕ್ ಸಾಧ್ಯತೆ?:

ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬಿಬಿಎಂಪಿಯಲ್ಲಿ ಪ್ರತ್ಯೇಕವಾಗಿ ಆಚರಿಸುವುದಾಗಿ ಪಾಲಿಕೆಯ ಆಡಳಿತಾಧಿಕಾರಿಯವರು ಜೂ.27ರ ರಾಜ್ಯ ಮಟ್ಟದ ಕಾರ್ಯಕ್ರಮದ ವೇಳೆ ಪ್ರಕಟಿಸಿದ್ದರು. ಆದರೆ, ಈವರೆಗೂ ಜಯಂತಿ ಆಚರಿಸುವ ದಿನ ನಿಗದಿ ಮಾಡಿಲ್ಲ. ಸಮಿತಿ ಕೂಡ ರಚಿಸಿಲ್ಲ. ಹಿಂದಿನ 3 ವರ್ಷಗಳಂತೆ ಈ ಬಾರಿಯೂ ಪಾಲಿಕೆಯು ಕೆಂಪೇಗೌಡ ಜಯಂತಿ ಆಚರಿಸುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.