ಜಿಲ್ಲೆ

ಮೂಲ ಸೌಕರ್ಯ ಕಡಿತಕ್ಕೆ ಮುಂದಾದ ಪಾಲಿಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದಲ್ಲಿನ ವಾಣಿಜ್ಯ ಮಳಿಗೆಗಳ ಕರ ವಸೂಲಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರದಿಂದ ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಾಕಿ ಕರ ಪಾವತಿಗೆ ಹಲವು ಬಾರಿ ನೀಡಿದ ಸೂಚನೆ, ನೋಟಿಸ್​ಗಳಿಗೂ ಅಂಗಡಿಕಾರರು ಸ್ಪಂದಿಸದ ಕಾರಣ ಕಟ್ಟಡಗಳಿಗೆ ಪಾಲಿಕೆ ವತಿಯಿಂದ ನೀಡಿರುವ ಮೂಲಸೌಲಭ್ಯಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಪಾಲಿಕೆ ನಿರ್ಧರಿಸಿದೆ.

ವಲಯ ಕಚೇರಿ-3ರಲ್ಲಿ ಸುಮಾರು 4.5 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದೆ. ಹೀಗಾಗಿ ಈ ಕಚೇರಿ ವ್ಯಾಪ್ತಿಯ ಗಾಂಧಿಚೌಕ್​ ಸೇರಿ ಇತರ ಕಡೆಗಳಲ್ಲಿನ ಸುಮಾರು 60 ಅಂಗಡಿಗಳ ಮೇಲೆ ಈ ಕ್ರಮಕೈಗೊಳ್ಳಲಾಗಿದೆ. ಪಾಲಿಕೆ ವತಿಯಿಂದ ಕಲ್ಪಿಸಿರುವ ಯುಜಿಡಿ ವ್ಯವಸ್ಥೆ, ನಳ, ಗಟಾರು ಸೌಕರ್ಯಗಳ ಜತೆಗೆ ಪಾಲಿಕೆ ವತಿಯಿಂದ ನೀಡಿರುವ ಇತರ ಎಲ್ಲ ಸೌಕರ್ಯ ಕಡಿತಗೊಳಿಸಿದ್ದಾರೆ.

ಮೊದಲಿನ ದಿನಗಳಲ್ಲಿ ಆಸ್ತಿ ಜಪ್ತಿ ಮಾಡುವ ಕೆಲಸ ಮಾಡಲಾಗುತ್ತಿತ್ತು. ಪಾಲಿಕೆಯಿಂದ ಸಕಲ ಸೌಲಭ್ಯಗಳನ್ನು ಕಲ್ಪಿಸಿದ ಬಳಿಕವೂ ಕರ ಬಾಕಿ ಉಳಿಸಿಕೊಳ್ಳುತ್ತಿದ್ದಾರೆ. ಹಲವು ಬಾರಿ ಸೂಚನೆ ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಸಹಾಯಕ ಅಭಿಯಂತರ ರಾಜೇಶ್​ ಎಸ್​.ಪಿ., ಕಂದಾಯ ಅಧಿಕಾರಿ ಜಿ.ಆರ್​. ಮಣಕಟ್ಟಿಮಠ, ಕಂದಾಯ ನಿರೀಕ್ಷಕ ಜಿ.ವಿ. ಹಿರೇಮಠ ಹಾಗೂ ಕರ ವಸೂಲಿಗಾರರು ಇದ್ದರು.