ಜಿಲ್ಲೆ

ಎಲ್ಲೆಂದರಲ್ಲಿ ಇನ್ನು ಕೇಬಲ್ ನೇತಾಡುವುದಿಲ್ಲ, 15 ದಿನದಲ್ಲಿ ಸರಿಪಡಿಸುವುದಾಗಿ ಆಯುಕ್ತರ ಭರವಸೆ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಎಲ್ಲೆಂದರಲ್ಲಿ ನೇತಾಡುತ್ತಿರುವ ಕೇಬಲ್, ವೈರ್ಗಳಿಗೆ ಮುಕ್ತಿ ನೀಡಿ ಅವುಗಳು ಸರಿಯಾದ ಕ್ರಮದಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಇಲ್ಲಿಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಅವರು ಉತ್ತರಿಸಿದರು.

ಕೇಬಲ್ ಹಾಗೂ ಮೊಬೈಲ್ ಟವರ್ಗಳಿಗೆ ಯಾವುದೇ ಮಾರ್ಗದಶಿರ್ ಸೂತ್ರಗಳಿಲ್ಲ. ಮನಸೋ ಇಚ್ಚೆ ಕೇಬಲ್ ಎಳೆದು ಹೋಗಿರುತ್ತಾರೆ. ತುಂಡಾಗಿ ಬಿದ್ದರೆ ಸಾರ್ವಜನಿಕರಿಗೆ ತೊಂದರೆ ನೀಡುತ್ತವೆ. ಕೆಲವೊಮ್ಮೆ ಅಪಾಯವನ್ನೂ ತಂದೊಡ್ಡುತ್ತವೆ. ಅನೇಕ ಟೆಲಿೋನ್ ಕಂಪನಿಗಳು ಈ ರೀತಿ ಕೇಬಲ್ ಹಾಕಿವೆ. ಕೆಲವೆಡೆ ನೆಲ ಅಗೆದು ಹಾಗೇ ಬಿಟ್ಟಿವೆ. ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಪ್ಪಣ್ಣ ಮಜ್ಜಗಿ, ಇತರರು ಆಗ್ರಹಿಸಿದರು.

ವಿದ್ಯುತ್ ಕಂಬಗಳ ಮೂಲಕ ಕೇಬಲ್ ಎಳೆಯಲಾಗುತ್ತಿದೆ. ಈ ಬಗ್ಗೆ ಹೆಸ್ಕಾಂಗೂ ನೋಟೀಸ್ ಕೊಡಬೇಕು ಎಂದು ಹಲವರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು, ಪಾಲಿಕೆ ಅಧೀಕ್ಷಕರು, ಜಂಟಿ ಆಯುಕ್ತರ ನೇತೃತ್ವದಲ್ಲಿ ತಂಡ ರಚಿಸಿ 15 ದಿನದಲ್ಲಿ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.

ಸಭೆ ನಡೆಸಿದ ಖಂಡೇಕರ: ಬುಧವಾರ ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಪಾಲಿಕೆ ಸಭೆಯನ್ನು ಕೋರಂ ಅಭಾವದ ಹಿನ್ನೆಲೆಯಲ್ಲಿ ಮೇಯರ್ ವೀಣಾ ಬರದ್ವಾಡ ಅವರು ಒಂದು ತಾಸು ಮುಂದೂಡಿದರು.

ಸಿಎಂ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಮೇಯರ್ ಹಾಗೂ ಅಧಿಕಾರಿಗಳು ಅವರ ಸ್ವಾಗತಕ್ಕೆ ತೆರಳಿದರು.

ಮಧ್ಯಾಹ್ನ 12ಕ್ಕೆ ಆರಂಭವಾಗಬೇಕಿದ್ದ ಸಭೆಗೆ ಉಳಿದ ಸದಸ್ಯರು ಆಗಮಿಸಿದ್ದರಿಂದ ಹಿರಿಯ ಸದಸ್ಯ ವೀರಣ್ಣ ಸವಡಿ, ಶಿವು ಹಿರೇಮಠ, ರಾಜಣ್ಣ ಕೊರವಿ, ಈರೇಶ ಅಂಚಟಗೇರಿ ಇತರರು ಸ್ಥಾಯಿ ಸಮಿತಿ ಅಧ್ಯಕ್ಷ ಬೀರಪ್ಪ ಖಂಡೇಕರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸೋಣ ಎಂದು ಕಾಂಗ್ರೆಸ್ ಸದಸ್ಯರ ಒಪ್ಪಿಗೆಯೊಂದಿಗೆ ಮುಂದುವರಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪಾಲಿಕೆ ಮಾಜಿ ಸದಸ್ಯೆ ಮೀದಾ ಕಿಲ್ಲೇದಾರ, ಇತರ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಂತಾಪದ ನಂತರ ಕೆಲ ನಿಮಿಷ ಸಭೆ ಮುಂದೂಡಲಾಯಿತು.
12.30ರ ವೇಳೆಗೆ ಮೇಯರ್ ವೀಣಾ ಬರದ್ವಾಡ ಅವರು ಆಗಮಿಸಿ ಸಭೆ ಮುಂದುವರಿಸಿದರು.

ಆದರೆ, ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ ಅವರು, ಮೇಯರ್ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆ ನಡೆಸಬಹುದೇ? ಎಂದು ಪ್ರಶ್ನಿಸಿ ಈ ಕುರಿತು ದಾಖಲೆ ನೀಡುವಂತೆ ಪಟ್ಟು ಹಿಡಿದರು.

ಇದರಿಂದ ಸಭೆಯಲ್ಲಿ ಕೆಲಹೊತ್ತು ಗದ್ದಲದ ವಾತಾವರಣ ಉಂಟಾಯಿತು. ನಿಯಮಗಳ ಬಗ್ಗೆ ಗೊತ್ತಿಲ್ಲದ ಪ್ರತಿಪಕ್ಷದ ನಾಯಕರು ಎಂದು ಆಡಳಿತ ಪಕ್ಷದ ಬಿಜೆಪಿ ಸದಸ್ಯರು ಟೀಕಿಸಿದರು. ಮಾಹಿತಿ ಕೇಳಿದರೆ ಏನಾಯ್ತು? ಎಂದು ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್ ಹಾಗೂ ಉಪಮೇಯರ್ ಅವರ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಸಭೆ ನಡೆಸಬಹುದು ಎಂಬ ನಿಯಮವನ್ನು ಆಯುಕ್ತರು ಓದಿ ಹೇಳಿದರು.

ನೋಡಲ್ ಅಧಿಕಾರಿ: ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ, ಪಾಲಿಕೆ ಸಭೆಯ ನಿರ್ಣಯಗಳು, ವಿವಿಧ ಕಾಮಗಾರಿಗಳ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದರು. ಈ ಮಧ್ಯೆ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಚಂದ್ರಶೇಖರ ಮನಗುಂಡಿ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.

ತೆರಿಗೆ ಪರಿಷ್ಕರಣೆ ಸದ್ಯಕ್ಕಿಲ್ಲ: ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕೆಂಬ ವಿಷಯ ಚರ್ಚೆಗೆ ಬಂದಾಗ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವಿಷಯವನ್ನು ಹಣಕಾಸು ಸ್ಥಾಯಿ ಸಮಿತಿ ಮುಂದೆ ಇಟ್ಟು ಅಂತಿಮಗೊಳಿಸಬೇಕು. ಅಲ್ಲಿಯವರೆಗೆ ಪರಿಷ್ಕರಣೆ ಮಾಡಬಾರದು ಎಂದು ಒತ್ತಾಯಿಸಿದರು. ತೆರಿಗೆ ವಸೂಲಿ ಇತ್ಯಾದಿ ಕೆಲಸಕ್ಕೆ ಭದ್ರತಾ ಸಿಬ್ಬಂದಿ ನೇಮಕಕ್ಕೆ ಟೆಂಡರ್ ಕರೆಯುವ ಬದಲು ಈಗಾಗಲೇ ಇರುವ ಹೋಂ ಗಾರ್ಡ್ಗಳನ್ನು ನೇಮಿಸಿಕೊಳ್ಳಬೇಕು. ಇದರಿಂದ ಪಾಲಿಕೆಗೂ ಅನುಕೂಲವಾಗಲಿದೆ ಎಂದು ಈರೇಶ ಅಂಚಟಗೇರಿ, ಇತರರು ಆಗ್ರಹಿಸಿದರು.