ಜಿಲ್ಲೆ

ಕಾಲಮಿತಿಯೊಳಗೆ ರಸ್ತೆಗುಂಡಿ ಮುಚ್ಚಲು ಪಾಲಿಕೆ ಮುಖ್ಯ ಆಯುಕ್ತರ ಸೂಚನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ಕಾಲಮಿತಿಯೊಳಗಾಗಿ ಮುಚ್ಚುವಂತೆ ಆಯಾ ವಲಯದ ಆಯುಕ್ತರು ಹಾಗೂ ಮುಖ್ಯ ಅಭಿಯಂತರರಿಗೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದಲ್ಲಿ ರಸ್ತೆಗುಂಡಿ ಮುಚ್ಚುವುದು, ರಾಜಕಾಲುವೆ ಸ್ವಚ್ಛತೆ ಸೇರಿ ಇನ್ನಿತರ ವಿಷಯಗಳ ಕುರಿತು ಸೋಮವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಆರ್ಟಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಈಗಾಗಲೇ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಮತ್ತಷ್ಟು ಚುರುಕು ನೀಡಿ ತ್ವರಿತಗತಿಯಲ್ಲಿ ಗುಂಡಿಗಳನ್ನು ಮುಚ್ಚಬೇಕು. ವಲಯ ವ್ಯಾಪ್ತಿಯಲ್ಲಿ ವಾರ್ಡ್ ಇಂಜಿನಿಯರ್‌ಗಳು ರಸ್ತೆಗುಂಡಿಗಳನ್ನು ಪತ್ತೆಮಾಡಿ ಕೂಡಲೆ ಗುಂಡಿಗಳನ್ನು ಮುಚ್ಚಬೇಕು. ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಮೂಲಕ ಹಗಲು - ರಾತ್ರಿ ರಸ್ತೆಗುಂಡಿಗಳನ್ನು ಮುಚ್ಚಬೇಕೆಂದು ಸೂಚಿಸಿದರು.

ರಾಜಕಾಲುವೆಗಳಲ್ಲಿ ಸ್ವಚ್ಛತೆ ಕಾಪಾಡಿ:

ನಗರ ವ್ಯಾಪ್ತಿಯ ಪ್ರಥಮ, ದ್ವಿತೀಯ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತುವ ಕೆಲಸ ನಡೆಯಬೇಕು. ರಾಜಕಾಲುವೆಗೆ ತ್ಯಾಜ್ಯ ಬಿಸಾಡದಂತೆ ಕ್ರಮ ವಹಿಸಬೇಕು. ಎಲ್ಲೆಡೆ ಸ್ವಚ್ಚತೆ ಕಾಪಾಡಿ ಎಲ್ಲಿಯೂ ಮಳೆನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ.ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಎಲ್ಲ ವಲಯಗಳ ಆಯುಕ್ತರು, ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು ಸೇರಿ ಇನ್ನಿತರ ಅಧಿಕಾರಿಗಳಿದ್ದರು.

ಕಳೆದ ವಾರ 6 ಸಾವಿರದಷ್ಟಿದ್ದ ರಸ್ತೆಗುಂಡಿಗಳಲ್ಲಿ ಈವರೆಗೆ 1,000ದಷ್ಟು ಮುಚ್ಚಲಾಗಿದೆ. ಬಾಕಿ ಉಳಿದಿರುವ 5 ಸಾವಿರ ಗುಂಡಿಗಳನ್ನು ಮೇ 31ರೊಳಗೆ ಮುಚ್ಚಲು ಸೂಚಿಸಲಾಗಿದೆ. ಹೆಚ್ಚು ಗುಂಡಿಗಳಿರುವ ಆರ್.ಆರ್.ನಗರ, ದಾಸರಹಳ್ಳಿ ವಲಯಕ್ಕೆ ಮಾತ್ರ ಜೂ.6ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ನಗರವನ್ನು ಗುಂಡಿ ಮುಕ್ತಗೊಳಿಸುವ ಆಶಯ ಈಡೇರಿಸಲಾಗುವುದು.

- ತುಷಾರ್ ಗಿರಿನಾಥ್, ಪಾಲಿಕೆ ಮುಖ್ಯ ಆಯುಕ್ತ