ಬೆಂಗಳೂರು: ಮಹಾನಗರದಲ್ಲಿ ಕಳೆದೆರಡು ವಾರಗಳಿಂದ ಕೋವಿಡ್ ಪ್ರಕರಣಗಳಲ್ಲಿ ಏರಿಳಿತವಾಗುತ್ತಿದ್ದು, ಮಂಗಳವಾರ ವರದಿಯಾದ ಮೂರು ಪ್ರಕರಣ ರಾಜಧಾನಿಗೆ ಕಂಟಕವಾಗಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಲಾಕ್ಡೌನ್ ಸಡಿಲಿಕೆ ಮುಳುವಾಯಿತೇ ಎಂಬ ಪ್ರಶ್ನೆ ಮೂಡಿದೆ.
ಪೂರ್ಣ ಹಸಿರು ವಲಯದಲ್ಲಿದ್ದ ಬಿಟಿಎಂ ಲೇಔಟ್ನಲ್ಲಿ ಗರ್ಭಿಣಿಗೆ ಸೋಂಕು ತಗುಲಿರುವುದು ಭೀತಿಗೆ ಕಾರಣವಾಗಿದೆ. ಬಿಟಿಎಂ ಲೇಔಟ್ ವಾರ್ಡ್ನ ಇಕೋಬಾನಗರ ನಿವಾಸಿ, 30 ವರ್ಷದ ಗರ್ಭಿಣಿಯ ಮಾಸಿಕ ತಪಾಸಣೆ ವೇಳೆ ಕರೊನಾ ಸೋಂಕು ದೃಢವಾಗಿದೆ. ತಪಾಸಣೆ ವೇಳೆ ಮಹಿಳೆಗೆ ಶೀತ, ಜ್ವರ ಹಾಗೂ ಕೆಮ್ಮು ಇರುವುದನ್ನು ತಿಳಿದ ಆಸ್ಪತ್ರೆ ಸಿಬ್ಬಂದಿ ಗಂಟಲದ್ರವ ಪರೀಕ್ಷೆ ಮಾಡಿಸಿದಾಗ ವಿಚಾರ ಬಯಲಾಗಿದೆ. ಲಾಕ್ಡೌನ್ ಜಾರಿಯಾದಾಗಿನಿಂದ ಮನೆಯಿಂದ ಹೊರಗೆ ಬಾರದ ಮಹಿಳೆಯಲ್ಲಿ ಸೋಂಕು ಕಂಡುಬಂದಿರುವುದು ಆತಂಕ್ಕೀಡುಮಾಡಿದೆ. ಆಕೆಯ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್ ಮಾಡಲಾಗಿದೆ.
ನಾಲ್ವರು ಗರ್ಭಿಣಿಯರಿಗೆ ಸೋಂಕು: ಗರ್ಭಿಣಿಯಲ್ಲಿ ಸೋಂಕು ದೃಢಪಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಮತ್ತೊಮ್ಮೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯೂ ಸೇರಿ ಈವರೆಗೂ ನಗರದ ಮೂವರು ಹಾಗೂ ಹೊರ ಜಿಲ್ಲೆಯ ಓರ್ವ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಚಾಂದಿನಿ ಚೌಕ್ ಸೀಲ್ಡೌನ್: ಶಿವಾಜಿನಗರದ ರಿಜೆಂಟಾ ಹೋಟೆಲ್ನ ಸ್ವಚ್ಛತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಆತ ಹಾಗೂ ಹೋಟೆಲ್ನ ಇತರ 18 ಸಿಬ್ಬಂದಿ ಸೇರಿ ಹೋಟೆಲ್ನಲ್ಲಿದ್ದ 72 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆತ ವಾಸಿಸುತ್ತಿದ್ದ ಚಾಂದಿನಿ ಚೌಕ್ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಶಿವಾಜಿನಗರದ ಶಿಫಾ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆ ಸಿಬ್ಬಂದಿಯನ್ನು ರಿಜೆಂಟಾ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅವರಿಂದ ಸೋಂಕು ಹರಡಿರುವ ಅನುಮಾನವಿದೆ.
ನಗರದಲ್ಲಿ ಸೋಂಕಿತರ ಸಂಖ್ಯೆ 153ಕ್ಕೆ ಏರಿಕೆಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. 75 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, 71 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆ ಸೀಲ್ಡೌನ್ ಮಾಡಲ್ಲ
ಗರ್ಭಿಣಿಯಲ್ಲಿ ಮಂಗಳವಾರ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದ ಜಯನಗರದ ಖಾಸಗಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡುವುದಿಲ್ಲ. ಬದಲಿಕೆ ಆಕೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಕಂಟೇನ್ಮೆಂಟ್ ವಲಯ
ರಿಜೆಂಟಾ ಹೋಟೆಲ್ನ ಸಿಬ್ಬಂದಿ ಹೆಚ್ಚಾಗಿ ಹೊರಗೆ ಸಂಚಾರ ಮಾಡಿಲ್ಲ. ಹೀಗಾಗಿ ಸೋಂಕಿತನ ಸಂಪರ್ಕದಲ್ಲಿದ್ದ ಹೋಟೆಲ್ ನಿವಾಸಿಗಳನ್ನು ಕ್ವಾರಂಟೇನ್ ಮಾಡಲಾಗಿದೆ. ಆತ ವಾಸವಿದ್ದ ಮನೆಯ 100 ಮೀ. ಪ್ರದೇಶದಲ್ಲಿ ಮಾತ್ರ ಕಂಟೇನ್ಮೆಂಟ್ ಮಾಡಲಾಗುತ್ತಿದೆ.ಆದರೆ, ಇಡೀ ಶಿವಾಜಿನಗರವನ್ನು ಸೀಲ್ಡೌನ್ ಮಾಡುವ ಚಿಂತನೆಯಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ತಿಳಿಸಿದ್ದಾರೆ.
ಹೊಂಗಸಂದ್ರದಲ್ಲಿ ಮತ್ತೆ ಸೋಂಕು
ಹೊಂಗಸಂದ್ರದಲ್ಲಿ ಬಿಹಾರಿ ಕಾರ್ವಿುಕನಿಂದ 30 ಜನರಿಗೆ ಸೋಂಕು ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿದ್ದವರು ಇನ್ನು ಮೂರು ದಿನಗಳಲ್ಲಿ ಕ್ವಾರಂಟೇನ್ ಮುಗಿಸಿ ಹೊರಬರಲಿದ್ದಾರೆ. ಈಗ ಅದೇ ವಾರ್ಡ್ನಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. 45 ವರ್ಷದ ಈ ಸೋಂಕಿತ ವ್ಯಕ್ತಿ ಗುಜರಿ ಅಂಗಡಿಯಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದ. ಆತನ ಪ್ರ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ.