ಜಿಲ್ಲೆ

ಇಬ್ಬರಲ್ಲಿ ಕರೊನಾ ಸೋಂಕು ದೃಢ

Hassan

ಅರಕಲಗೂಡು: ತಾಲೂಕಿನಲ್ಲಿ ಕರೊನಾ ಆತಂಕ ಮುಂದುವರಿದಿದ್ದು ಭಾನುವಾರ ಮತ್ತಿಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗ್ರಾಮಗಳನ್ನು ಸೀಲ್‌ಡೌನ್ ಮಾಡಿದ್ದಾರೆ.

ಕೊಣನೂರು ಹೋಬಳಿ ತರಿಗಳಲೆ ಗ್ರಾಮದ ನಲವತ್ತು ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯನ್ನು ಹೊಳೆನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮತ್ತೊಬ್ಬ 31 ವರ್ಷದ ವ್ಯಕ್ತಿ ಬೆಂಗಳೂರಿನಿಂದ ಬಂದಿದ್ದು ಈತನಿಗೆ ಕರೊನಾ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಬೆಂಗಳೂರಿನಿಂದ ಬಂದಿದ್ದ ಗೊಬ್ಬಳಿ ಕಾವಲು ವ್ಯಕ್ತಿ ಚಿಕಿತ್ಸೆಗಾಗಿ ಶನಿವಾರ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದ. ಹೀಗಾಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಆರೋಗ್ಯ ನಿರೀಕ್ಷಕ ಆನಂದಗೌಡ ತಿಳಿಸಿದ್ದಾರೆ.

ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ತರಿಗಳಲೆ ಗ್ರಾಮದಲ್ಲಿ 27 ಜನರು ಹಾಗೂ ಗೊಬ್ಬಳಿ ಕಾವಲು ಗ್ರಾಮದಲ್ಲಿ 11 ಜನರ ಗಂಟಲು ದ್ರವ ಸಂಗ್ರಹಿಸಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಗ್ರಾಮಗಳನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸರ್ ಸಿಂಪಡಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಗೆ ಶನಿವಾರ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈತ ಸಂಚರಿಸಿದ್ದ ಎನ್ನಲಾದ ಮಡಿವಾಳರ ಬೀದಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಶನಿವಾರ ನಿಲುವಾಗಿಲು ಹಾಗೂ ಕಣಿಯಾರು ಗ್ರಾಮಗಳ ಇಬ್ಬರಿಗೆ ಸೋಂಕು ದೃಢಪಟ್ಟಿತ್ತು. ಪರಿಣಾಮವಾಗಿ ಎರಡು ಗ್ರಾಮಗಳನ್ನು ಸೀಲ್‌ಡೌನ್ ಮಾಡಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ, ಡಾ. ನಮ್ರತಾ, ದೊಡ್ಡಮಗ್ಗೆ ರಾಜಸ್ವ ನಿರೀಕ್ಷಕ ಬಿ.ಎಸ್. ರಾಘವೇಂದ್ರ, ಗ್ರಾಮಲೆಕ್ಕಿಗ ಎಚ್.ವಿ. ಸಂಜಿತ್‌ಕುಮಾರ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


19 ವಿದ್ಯಾರ್ಥಿಗಳ ವರದಿ ನೆಗೆಟಿವ್: ತಾಲೂಕಿನ ಮಲ್ಲಿಪಟ್ಟಣ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದ ಕೊಠಡಿಯಲ್ಲಿದ್ದ ಎಲ್ಲ 19 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊಠಡಿಯಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದಾಗಲೇ ಶನಿವಾರ ಸೋಂಕು ದೃಢಪಟ್ಟಿದ್ದರಿಂದ ಆತಂಕ ಮೂಡಿಸಿತ್ತು. ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಹೀಗಾಗಿ ಕೊಠಡಿಯಲ್ಲಿ 19 ವಿದ್ಯಾರ್ಥಿಗಳು ಸೇರಿದಂತೆ ಆಸ್ಪತ್ರೆಯ ಒಟ್ಟು 122 ಸಿಬ್ಬಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು ಭಾನುವಾರ ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ತಿಳಿಸಿದರು.

ಮಲ್ಲಿಪಟ್ಟಣದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ನೆಗೆಟಿವ್ ವರದಿ ಬಂದಿರುವ ಎಲ್ಲ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಎರಡು ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಬಿಇಒ ಶಿವನಂಜೇಗೌಡ ತಿಳಿಸಿದರು.